ADVERTISEMENT

ಬ್ಯಾಗ್‌ನಲ್ಲಿ ಗನ್: ಜೆಡಿಎಸ್ ನಾಯಕ ಅಸ್ನೋಟಿಕರ್ ವಶಕ್ಕೆ, ಹೇಳಿಕೆ ಪಡೆದು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 12:46 IST
Last Updated 19 ಸೆಪ್ಟೆಂಬರ್ 2020, 12:46 IST
ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್
ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದ ವೇಳೆ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಅವರ ಬ್ಯಾಗ್‌ನಲ್ಲಿ ಗನ್ ಪತ್ತೆಯಾಗಿದ್ದು, ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ಪೊಲೀಸರ ಸುಪರ್ದಿಗೆ ನೀಡಿದ ಘಟನೆ ಶನಿವಾರ ನಡೆದಿದೆ.

ತುರ್ತು ಕೆಲಸ ನಿಮಿತ್ತ ಹೊರಟಿದ್ದ ಅಸ್ನೋಟಿಕರ್, ನಿಲ್ದಾಣಕ್ಕೆ ಬಂದಿದ್ದರು. ಪ್ರವೇಶ ದ್ವಾರದಲ್ಲಿ ತಮ್ಮ ಬಳಿ ಗನ್ ಇರುವ ಬಗ್ಗೆ ಯಾವುದೇ ನೋಂದಣಿ ಮಾಡಿಸಿರಲಿಲ್ಲ. ಅದನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ನಿಲ್ದಾಣದೊಳಗೆ ಹೊರಟಿದ್ದರು. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಗನ್ ಸಿಕ್ಕಿತ್ತು ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.

ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡ ಸಿಬ್ಬಂದಿ, ಅಸ್ನೋಟಿಕರ್ ಅವರನ್ನು ಗನ್ ಸಮೇತವೇ ಒಪ್ಪಿಸಿದರು.

ADVERTISEMENT

ವಿಮಾನ ನಿಲ್ದಾಣ ಠಾಣೆಗೆ ಅಸ್ನೋಟಿಕರ್ ಅವರನ್ನು ಕರೆತಂದ ಪೊಲೀಸರು ವಿಚಾರಣೆ ನಡೆಸಿದರು. ಹೇಳಿಕೆ ಸಹ ಪಡೆದರು.

'ತುರ್ತು ಕೆಲಸಕ್ಕಾಗಿ ಹೊರಟಿದ್ದೆ. ಅವಸರವಿತ್ತು. ಬ್ಯಾಗ್‌ನಲ್ಲಿ ಗನ್ ಇರುವುದೇ ಗೊತ್ತಿರಲಿಲ್ಲ. ಅದು ಪರವಾನಗಿ ಇರುವ ಗನ್' ಎಂದು ಪೊಲೀಸರಿಗೆ ಅಸ್ನೋಟಿಕರ್ ಹೇಳಿಕೆ ನೀಡಿದ್ದಾರೆ.

ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ಅಸ್ನೋಟಿಕರ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ವಿಚಾರಣೆಗೆ ಕರೆದರೆ ಬರುವಂತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.