ADVERTISEMENT

ಕರ್ನಾಟಕ - ಕೇರಳ ಗಡಿ ಬಂದ್: ಕೇರಳ ಸಿಎಂಗೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಪತ್ರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 14:50 IST
Last Updated 2 ಏಪ್ರಿಲ್ 2020, 14:50 IST
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ   

ಬೆಂಗಳೂರು: ಕೇರಳ-ಕರ್ನಾಟಕ ಗಡಿಯನ್ನು ಆಂಬ್ಯುಲೆನ್ಸ್‌ಗೆ ತೆರೆಯುವ ನಿಟ್ಟಿನಲ್ಲಿ ಪ್ರಧಾನಿಗೆ ತಿಳಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿ ಜೆಡಿಎಸ್ ವರಿಷ್ಠ ಎಚ್‌ಡಿದೇವೇಗೌಡ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ‌.

ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ದಿಗ್ಬಂಧನ ವಿಧಿಸಿದ್ದರೂ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ ಅನ್ನು ಪೊಲೀಸರು ತಡೆದು ನಿಲ್ಲಿಸುವುದು ಅಮಾನವೀಯ. ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುವು ಮಾಡಿಕೊಡಬೇಕು. ಈ ಕುರಿತು ರಾಜ್ಯ ಸರ್ಕಾರ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿನ್ನೆ ಪತ್ರ ಬರೆದಿದ್ದರು.

ಕೋವಿಡ್-19 ತಡೆಗೆ ಶ್ರಮಿಸುತ್ತಿರುವ ನೀವು ಮತ್ತು ನಿಮ್ಮ ಸರ್ಕಾರದ ಎಲ್ಲ ಸದಸ್ಯರಿಗೂ ಅಭಿನಂದನೆಗಳು. ಮಂಗಳೂರು - ಕಾಸರಗೋಡು ರಸ್ತೆ ಸಂಪರ್ಕ ನಿರ್ಬಂಧಿಸಿರುವುದರಿಂದಾಗಿ ಕಾಸರಗೋಡಿನ‌ಲ್ಲಿ ಅತಿಹೆಚ್ಚಿರುವ ಕನ್ನಡಿಗರು ಸೇರಿದಂತೆ ಬಹುತೇಕರು ಸೂಕ್ತ ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದಾರೆ. ಈಗಾಗಲೇ ಐದಾರು ಜನರು ಮೃತಪಟ್ಟಿರುವ ಕುರಿತು ವರದಿಯಾಗಿದೆ. ತುರ್ತು ಸನ್ನಿವೇಶದಲ್ಲಿ ರಾಜ್ಯ ಪ್ರವೇಶಿಸಲು ಅವಕಾಶ ನೀಡಬೇಕೆಂದು ಕೂಡಲೇ ನಾನು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದೆ. ಆದರೆ ಕರ್ನಾಟಕ ಸರ್ಕಾರ ತಮ್ಮ ಮನವಿಯನ್ನು ನಿರಾಕರಿಸಿದೆ. ರಾಜ್ಯ ಸರ್ಕಾರದ ಈ‌ ನಡೆಯನ್ನು ತಾವು ಖಂಡಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಕೇರಳ ರಾಜ್ಯಕ್ಕೆ ಅಗತ್ಯವಿರುವ ಔಷಧ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ತೊಂದರೆಯಾಗುತ್ತಿದೆ. ಬಿಜೆಪಿ ಸರ್ಕಾರದ ಈ ಧೋರಣೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಸಾಗಣಿಕೆಗೆ ಕರ್ನಾಟಕ ಸರ್ಕಾರ ಅನುವು ಮಾಡಿಕೊಡಬೇಕಿತ್ತು ಎಂದು ಒತ್ತಾಯಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು 21 ದಿನ ದೇಶದಾದ್ಯಂತ ಲಾಕ್‌ಡೌನ್ ಘೋಷಿಸುವ ಮೊದಲೇ ಪ್ರಧಾನಿ ನರೇಂದ್ರ ಮೋದಿಯವರು ವೈದ್ಯಕೀಯ ಸೇವೆ ಮತ್ತು ಅಗತ್ಯ ವಸ್ತುಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಜನರಿಗೆ ಅಗತ್ಯ ವಸ್ತುಗಳೇ ದೊರೆಯದಂತಾಗಿದೆ. ಕಾಸರಗೋಡು ಹಾಗೂ ಮಂಗಳೂರು ಗಡಿ ವಿಚಾರದ ಬಗ್ಗೆ ಪ್ರಧಾನಿಗಳ ಗಮನ ಸೆಳೆಯಲು ಅವರಿಗೂ ಪತ್ರ ಬರೆದು ಆಸ್ಪತ್ರೆ ಮತ್ತು ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುವು ಮಾಡಿ ಕೊಡಲು ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಪಿಣರಾಯಿ ವಿಜಯನ್‌ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.