ADVERTISEMENT

ದೇಶದ ಆರ್ಥಿಕತೆ ಕುಸಿತ ಕಾಣಿಸದಂತೆ ಮೋದಿ ಯಾವ ಗೋಡೆ ಕಟ್ಟುತ್ತಾರೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 4:23 IST
Last Updated 18 ಫೆಬ್ರುವರಿ 2020, 4:23 IST
ಎಚ್. ಡಿ. ಕುಮಾರಸ್ವಾಮಿ
ಎಚ್. ಡಿ. ಕುಮಾರಸ್ವಾಮಿ   

ಬೆಂಗಳೂರು: ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ದೇಶದಲ್ಲಿ ನಡೆಯುತ್ತಿರುವ ಸಿದ್ಧತೆ ಬಗ್ಗೆ ಈಗಾಗಲೇ ಅಪಸ್ವರಗಳು ಕೇಳಿಬಂದಿವೆ. ಟ್ರಂಪ್ ಬರುವ ವೇಳೆ ಕೊಳೆಗೇರಿಗಳು ಕಾಣಿಸದಂತೆ ಗೋಡೆ ನಿರ್ಮಿಸಿರುವುದನ್ನು ಕುರಿತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಭಾರತದ ಭೇಟಿ ವೇಳೆ ಅಹ್ಮದಾಬಾದ್‌ನ ಕೊಳಗೇರಿಗಳು ಕಾಣಿಸದಂತೆ ಪ್ರಧಾನಿ ಮೋದಿ ಅವರು ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ! ಆದರೆ ಅಧಃಪತನಕ್ಕೆ ಕುಸಿದಿರುವ ದೇಶದ ಆರ್ಥಿಕತೆ ಕಾಣಿಸದಂತೆ ಮೋದಿ ಅವರು ಯಾವ ಗೋಡೆ ಕಟ್ಟುತ್ತಾರೆ' ಎಂದು ಪ್ರಶ್ನಿಸಿದ್ದಾರೆ.

'ದೇಶವ್ಯಾಪಿ ಭುಗಿಲೆದ್ದಿರುವ ಸಿಎಎ ವಿರೋಧಿ ಹೋರಾಟ ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿ ಅವರೇ ಉತ್ತರಿಸುವಿರಾ?' ಎಂದು ಕಿಡಿಕಾರಿದ್ದಾರೆ.

ADVERTISEMENT

ಟ್ರಂಪ್ ಭೇಟಿಯು ಭಾರತಕ್ಕೆ ಚಕ್ರವರ್ತಿಯೊಬ್ಬರು ಭೇಟಿ ನೀಡುತ್ತಿರುವಂತಿದೆ. ಅದಕ್ಕಾಗಿ ನಡೆಯುತ್ತಿರುವ ಸಿದ್ಧತೆಗಳು ‘ಗುಲಾಮರ ಮನಸ್ಥಿತಿ’ಯನ್ನು ಬಿಂಬಿಸುವಂತಿವೆ ಎಂದು ಶಿವಸೇನಾ ನಿನ್ನೆಯಷ್ಟೇ(ಫೆ.17) ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.