ADVERTISEMENT

ರಾಜ್ಯ ಸರ್ಕಾರ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2020, 7:49 IST
Last Updated 11 ಅಕ್ಟೋಬರ್ 2020, 7:49 IST
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ವಿಚಾರವಾಗಿ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಅವರು, 'ರಾಜ್ಯ ಸರಕಾರ ಈ ವರ್ಷ ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯನ್ನು ರದ್ದುಗೊಳಿಸಿ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಈ ವರ್ಷದ ಅಕ್ಟೋಬರ್‌ 3 ರಿಂದ 26ರ ವರೆಗೆ ನೀಡಬೇಕಿದ್ದ ಮಧ್ಯಂತರ ರಜೆಯನ್ನು ಸರ್ಕಾರ ರದ್ದು ಮಾಡಿರುವುದಕ್ಕೆ ಆಧಾರ ಏನು? ಶಿಕ್ಷಕರೆಂದರೆ ಸರ್ವಾಧಿಕಾರದ ಕೆಳಗೆ ದುಡಿಯುವ ದಿನಗೂಲಿ ನೌಕರರೆ?' ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ADVERTISEMENT

'ಕೊರೊನ ಕಾರಣಕ್ಕೆ ಮಕ್ಕಳು ಶಾಲೆಗೆ ಬಾರದಿದ್ದರೂ ಶಿಕ್ಷಕರನ್ನು ಅನ್ಯ ಸೇವೆಗೆ ಯಥೇಚ್ಛವಾಗಿ ಬಳಸಲಾಗುತ್ತಿದೆ. ಆದಾಗ್ಯೂ ಮಧ್ಯಂತರ ರಜೆ ರದ್ದುಪಡಿಸಿ ಸರಕಾರ ಯಾವ ಪುರುಷಾರ್ಥ ಸಾಧನೆಗೆ ಹೊರಟಿದೆ?' ಎಂದು ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಶಿಕ್ಷಕ ಸಮೂಹವನ್ನು ಗೌರವದಿಂದ ನಡೆಸಿಕೊಳ್ಳಬೇಕಾದ ಸರಕಾರ, ದರ್ಪದ ಆದೇಶಗಳನ್ನು ಜಾರಿ ಮಾಡಿ,ಶಾಪಕ್ಕೆ ಗುರಿಯಾಗುತ್ತಿದೆ. 'ಹರ ಮುನಿದರೂ ಗುರು ಕಾಯ್ವನು' ಎಂಬುದನ್ನು ಸರಕಾರ ಮರೆಯಬಾರದು. ರಾಜ್ಯ ಸರ್ಕಾರ ಅಕ್ಟೋಬರ್ 1ರಂದು ಮಧ್ಯಂತರ ರಜಾ ರದ್ದುಪಡಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಶಿಕ್ಷಕರಿಗೆ ಮಧ್ಯಂತರ ರಜೆ ಘೋಷಿಸಬೇಕು' ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.