ADVERTISEMENT

ಸರ್ಕಾರದ ವಿರುದ್ಧ ರಾಹುಲ್‌ಗೆ ದೂರು ಕೊಟ್ಟಿಲ್ಲ

ದೋಸ್ತಿಯಿಂದ ಕಾಂಗ್ರೆಸ್‌ಗೆ ಧಕ್ಕೆ ಎಂಬ ಮಾತಿನಲ್ಲಿ ಅರ್ಥವಿಲ್ಲ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 18:43 IST
Last Updated 20 ಜೂನ್ 2019, 18:43 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಬೆಂಗಳೂರು:ರಾಜ್ಯ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಅವರಿಗೆ ಯಾರೂ ದೂರು ಕೊಟ್ಟಿಲ್ಲ ಎಂದುಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

‘ನನ್ನಿಂದ ಸರ್ಕಾರಕ್ಕೆ ಯಾವುದೇ ಅಪಾಯ ಆಗುವುದಿಲ್ಲ. ಮಧ್ಯಂತರ ಚುನಾವಣೆ ಬಗ್ಗೆ ನಾನು ಮಾತನಾಡಿಲ್ಲ, ನಾನು ಹೇಳಿದ್ದು ಮುಂಬರುವ ನಗರ ಸ್ಥಳೀಯ ಚುನಾವಣೆ ಬಗ್ಗೆ.ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ನಾವು ನಮ್ಮ ಕೋಟಾದ ಸಚಿವ ಸ್ಥಾನವನ್ನೇ ಪಕ್ಷೇತರ ಶಾಸಕರಿಗಾಗಿ ಬಿಟ್ಟುಕೊಟ್ಟಿದ್ದೇವೆ. ನಿಗಮ ಮಂಡಳಿಯಲ್ಲಿ ಸಹ ಕಾಂಗ್ರೆಸ್‌ಗೆ ಒಂದು ಸ್ಥಾನ ಬಿಟ್ಟುಕೊಡುವಂತೆ ಕುಮಾರಸ್ವಾಮಿಗೆ ಸೂಚಿಸಿದ್ದೇನೆ’ ಎಂದು ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿಶ್ವನಾಥ್‌ ರಾಜ್ಯ ಅಧ್ಯಕ್ಷರಾಗಿಯೇ ಮುಂದುವರಿಯಬೇಕು ಎಂಬುದು ನಮ್ಮೆಲ್ಲರ ಬಯಕೆ. ಅವರ ಮಮವೊಲಿಸುವ ಪ್ರಯತ್ನ ನಡೆದೇ ಇದೆ. ಪಕ್ಷದಲ್ಲೇ ಇರುವುದಾಗಿ ಹೇಳಿರುವ ಅವರು ಅಧ್ಯಕ್ಷರಾಗಿಯೂ ಮುಂದುವರಿಯುವ ವಿಶ್ವಾಸವಿದೆ’ ಎಂದರು.

ADVERTISEMENT

‘ಕಳೆದ ವಿಧಾನಸಭಾ ಚುನಾವಣೆ ವೇಳೆ ಮೈತ್ರಿ ಮಾತುಕತೆ ನಡೆಯುತ್ತಿದ್ದಾಗ ನಾನು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿ ಎಂದಿದ್ದೆ. ಆದರೆ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು. ಮೈತ್ರಿಯಿಂದ ಕಾಂಗ್ರೆಸ್‌ಗೆಧಕ್ಕೆಯಾಗಿದೆ ಎಂದು ಈಗ ಹೇಳುವುದರಲ್ಲಿ ಅರ್ಥವಿಲ್ಲ’ ಎಂದರು.

ಜೆಡಿಎಸ್‌ ಜನಪ್ರತಿನಿಧಿಗಳ ಸಭೆ: ‘ನಗರದಲ್ಲಿ ಶುಕ್ರವಾರ ಜೆಡಿಎಸ್‌ನಿಂದ ಗೆದ್ದ ಜನನಾಯಕರ ಸಮಾವೇಶ ನಡೆಯಲಿದೆ. ಜತೆಗೆ ಕಳೆದ ವಿಧಾನಸಭೆ ಮತ್ತು ಇತರ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳನ್ನೂ ಕರೆಸಿಕೊಂಡು ಅವರನ್ನು ಹುರಿದುಂಬಿಸುವ ಕೆಲಸ ನಡೆಯಲಿದೆ. ಪಕ್ಷದ ಸಂಘಟನೆಯೇ ನನ್ನ ಕೆಲಸ. ಮೈತ್ರಿ ಸರ್ಕಾರದಲ್ಲಿ ನನ್ನ ಪಾತ್ರವೇನೂ ಇಲ್ಲ’ ಎಂದು ದೇವೇಗೌಡರು ಹೇಳಿದರು.

ಒಂದು ದೇಶ ಒಂದು ಚುನಾವಣೆ ಕುರಿತಂತೆ ಅಭಿಪ್ರಾಯ ಭೇದ ಇದೆ. ಕೆಲವು ಸಣ್ಣ ಪಕ್ಷಗಳು ದಾರಿ ತಪ್ಪಿಸುವ ಅಪಾಯವೂ ಇದೆ ಎಂದ ಅವರು, ‘2ನೇ ಅವಧಿಯ ಮೋದಿ ಸರ್ಕಾರವು ನಾನು ಹಿಂದೆ ಮಂಡಿಸಿದ್ದ ಬಜೆಟ್‌ನ ಆಶಯಗಳನ್ನು ಈಡೇರಿಸಬೇಕು’ ಎಂದರು.

ರಾಜೀನಾಮೆ ಒಪ್ಪದಿದ್ದರೆ ಶಾಸಕ ಸ್ಥಾನವೂ ಬೇಡ: ವಿಶ್ವನಾಥ್
ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸದಿದ್ದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹುಣಸೂರು ಕ್ಷೇತ್ರದ ಶಾಸಕ ಎಚ್.ವಿಶ್ವನಾಥ್ ಇಲ್ಲಿ ಗುರುವಾರ ಬೆದರಿಕೆ ಹಾಕಿದ್ದಾರೆ.

ಈಚೆಗಷ್ಟೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಮಾಡಿ ಚರ್ಚಿಸಿದ್ದು, ರಾಜೀನಾಮೆ ಅಂಗೀಕರಿಸುವಂತೆ ಕೋರಿದ್ದರು. ಗೌಡರು ಮನವೊಲಿಸುವ ಪ್ರಯತ್ನ ನಡೆಸಿದ್ದರೂ, ಅದಕ್ಕೆ ಒಪ್ಪಿರಲಿಲ್ಲ ಎನ್ನಲಾಗಿದೆ.

ಅಧ್ಯಕ್ಷ ಸ್ಥಾನಕ್ಕೂ ಪತ್ರಿಕಾಗೋಷ್ಠಿಯಲ್ಲೇ ರಾಜೀನಾಮೆ ಪ್ರಕಟಿಸಿದ್ದು, ಈಗ ಅಂಗೀಕಾರಕ್ಕೆ ಒತ್ತಾಯಿಸಲೂ ಮಾಧ್ಯಮಗೋಷ್ಠಿ ಬಳಸಿಕೊಂಡಿದ್ದು ವಿಶೇಷ. ರಾಜೀನಾಮೆ ಒಪ್ಪದಿದ್ದರೆ ಶಾಸಕ ಸ್ಥಾನವೂ ಬೇಡ ಎಂದು ಬೇಸರದಿಂದಲೇ ಹೇಳುವ ಮೂಲಕ ಜೆಡಿಎಸ್‌ನಿಂದ ದೂರ ಸರಿಯುವ ಸೂಚನೆ ನೀಡಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ.

‘ನನ್ನ ಅನುಭವವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಳಸಿಕೊಳ್ಳಲಿಲ್ಲ.ಒಬ್ಬ ನಾಯಕನನ್ನು ರಾಜಕೀಯವಾಗಿ ಕೊಲ್ಲುವುದು ಒಳ್ಳೆಯದಲ್ಲ. ಮುಖ್ಯಮಂತ್ರಿ ಜತೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಆದರೆ ಸನ್ನಿವೇಶ ಅದಕ್ಕೆ ಆಸ್ಪದ ಕೊಟ್ಟಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಯಾರ ಮನೆಯ ಬಾಗಿಲನ್ನೂ ತಟ್ಟುವುದಿಲ್ಲ’ ಎಂದು ತಿಳಿಸಿದರು.

ಜೆಡಿಎಸ್ ಹಿತದೃಷ್ಟಿಯಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಹಿಸುವುದು ಒಳ್ಳೆಯದು. ಜೆಡಿಎಸ್‌ನಲ್ಲಿ ಖಾಲಿ ಇರುವ ಸಚಿವ ಸ್ಥಾನ ಭರ್ತಿಮಾಡಬೇಕು. ಸಮಾಜದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಶಿಕ್ಷಣ ಇಲಾಖೆಗೆ ಸಚಿವರು ಇಲ್ಲದಿರುವುದು ನೋವಿನ ಸಂಗತಿ. ಹೊಸದಾಗಿ ಸಚಿವರಾಗಿರುವ ಇಬ್ಬರಿಗೂ ಖಾತೆ ಹಂಚಿಕೆ ಮಾಡಬೇಕು. ಖಾತೆ ವಹಿಸಿದೆ ಆ ಸಮುದಾಯಕ್ಕೆ ನೋವುಂಟು ಮಾಡಬಾರದು ಎಂದರು.

ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ್ದು, ಸಮನ್ವಯ ಸಮಿತಿಗೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡದಿರುವುದಕ್ಕೆ ಕಿಡಿ ಕಾರಿದರು. ‘ಸಮನ್ವಯದ ಅರ್ಥವೇ ಗೊತ್ತಿಲ್ಲದವರು ಯಾವ ಸೀಮೆ ಅಧ್ಯಕ್ಷರು’ ಎಂದು ಗುಡುಗಿದರು. ‘ಅಹಿಂದ ನಾಯಕ ಎಂದು ಕರೆಸಿಕೊಂಡು ಅಲ್ಪಸಂಖ್ಯಾತ ಸಮುದಾಯದ ಮುಖಂಡ ರೋಷನ್ ಬೇಗ್ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿಸಿದ್ದಾರೆ. ನಾನು ಪಕ್ಷದಲ್ಲಿ ಇದಿದ್ದರೆ ನನ್ನ ಕತೆಯೂ ಇದಕ್ಕಿಂತ ಬೇರೆ ಆಗುತ್ತಿರಲಿಲ್ಲ’ ಎಂದು ಹೇಳಿದರು.

ಗ್ರಾಮವಾಸ್ತವ್ಯ ಉತ್ತಮ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಉತ್ತಮ. ಎಲ್ಲ ಜಿಲ್ಲೆಗಳಲ್ಲೂ ಇಂತಹ ಜನಪರ ಕೆಲಸ ಮಾಡಬೇಕು. ಆಗ ತಾರತಮ್ಯ ಆಯಿತು ಎಂಬ ಆರೋಪ ಇರುವುದಿಲ್ಲ. ತಮಿಳುನಾಡಿನಲ್ಲಿ ಕಾಮರಾಜ್‌ ಅವಧಿಯಲ್ಲಿ ಇಂತಹ ಕೆಲಸ ನಡೆಯುತ್ತಿತ್ತು ಎಂದು ದೇವೇಗೌಡರು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.