ADVERTISEMENT

ಸೂರ್ಯನ ಸುತ್ತ ಕಂಡ ವೃತ್ತ: ಅಪರೂಪದ ಈ ವಿದ್ಯಮಾನಕ್ಕೆ ಏನು ಕಾರಣ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮೇ 2021, 15:58 IST
Last Updated 24 ಮೇ 2021, 15:58 IST
ಸೂರ್ಯನ ಸುತ್ತಲ ಉಂಗುರದ ಚಿತ್ರ
ಸೂರ್ಯನ ಸುತ್ತಲ ಉಂಗುರದ ಚಿತ್ರ    

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸೋಮವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ ಆಗಸದಲ್ಲಿ ವಿಸ್ಮಯಕಾರಿ ವಿದ್ಯಮಾನವೊಂದು ಕಂಡುಬಂತು.

ಉಂಗುರದಂಥ ಆಕೃತಿಯೊಂದು ಸೂರ್ಯನ ಸುತ್ತಲೂ ಆವರಿಸಿ ಅಚ್ಚರಿ ಮೂಡಿಸಿತು. ಈ ಅಪರೂಪದ ವಿದ್ಯಮಾನವನ್ನು ನೋಡಿದ ಜನರು ಪುಳಕಿತ ಭಾವ ಅನುಭವಿಸಿದರು.

ಬೆಳಗ್ಗೆ 11 ಗಂಟೆ ಸುಮಾರಿಗೆ ಆರಂಭವಾದ ಈ ವಿದ್ಯಮಾನ ಮಧ್ಯಾಹ್ನ 12ರ ವರೆಗೆ ಜನರ ವೀಕ್ಷಣೆಗೆ ಸಿಕ್ಕಿದೆ. ಈ ಘಟನೆಯನ್ನು ಹಲವರು ಕ್ಯಾಮೆರಾದಲ್ಲೂ ಸೆರೆ ಹಿಡಿದಿದ್ದಾರೆ. ವಾಟ್ಸ್‌ಆ್ಯಪ್ ಗ್ರೂಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರಗಳು ವೈರಲ್ ಆಗಿವೆ.

ADVERTISEMENT

ಈ ವಿದ್ಯಮಾನಕ್ಕೆ ಕಾರಣವೇನು?

ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿ ಹುದುಗಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಹರಿದ ಪರಿಣಾಮ ಆಕರ್ಷಕ ವೃತ್ತ ಗೋಚರಿಸಿದೆ. ಕಾಮನಬಿಲ್ಲು ಸೃಷ್ಟಿಯಾದಂತೆ ನಡೆದ ವಿದ್ಯಮಾನ ಇದಾಗಿದ್ದು ಬಣ್ಣಗಳಲ್ಲಿ ಮಾತ್ರ ವ್ಯತ್ಯಾಸ ಕಂಡುಬಂದಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚು ಇರುವ ಮತ್ತು ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ. ಮೋಡಗಳಲ್ಲಿರುವ ಮಂಜುಗಡ್ಡೆ ಹರಳುಗಳು ಸೂರ್ಯನಿಗೆ 22 ಡಿಗ್ರಿ ಅಥವಾ ಹೆಚ್ಚಿನ ಕೋನದಲ್ಲಿ ವಕ್ರೀಭವನಕ್ಕೀಡಾಗುತ್ತವೆ. ಸೂರ್ಯನ ಸುತ್ತ ವೃತ್ತಾಕಾರವಾಗಿ ಹರಡಿಕೊಳ್ಳುತ್ತವೆ. ಈ ಹರಳುಗಳ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ, ಕಿರಣವು ಕಾಮನಬಿಲ್ಲಿನ ಏಳು ಬಣ್ಣಗಳಾಗಿ ಚದುರಿ, ಆಕರ್ಷಕ ಕಾಮನಬಿಲ್ಲು ಗೋಚರಿಸುತ್ತದೆ. ಇದು ತೀರಾ ಅಪರೂಪವೇನಲ್ಲ ಎಂದುವಿಜ್ಞಾನಿಗಳು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ. ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಸಮಯದಲ್ಲಿ ಇದು ಗೋಚರಿಸುತ್ತದೆ.

ಟ್ವಿಟರ್‌ನಲ್ಲಿ ಟ್ರೆಂಡ್‌

ಆಕಾಶದಲ್ಲಿ ಕಂಡು ಬಂದ ಈ ಅಪರೂಪದ ವಿದ್ಯಮಾನ ಸಾಮಾಜಿಕ ತಾಣದಲ್ಲಿ ಟ್ರೆಂಡ್‌ ಸೃಷ್ಟಿ ಮಾಡಿತು. ಹಲವರು ತಾವು ಸೆರೆಹಿಡಿದ ಚಿತ್ರಗಳನ್ನು ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಸ್ಟೇಟಸ್‌ಗಳಲ್ಲಿ ಹಂಚಿಕೊಂಡರು. #halosun ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.