ADVERTISEMENT

ಧ್ವನಿ–ಬೆಳಕಿನ ವೈಭವದ ಹಂಪಿ ಉತ್ಸವಕ್ಕೆ ತೆರೆ

ಬಿರು ಬಿಸಿಲು ಲೆಕ್ಕಿಸದೆ ಭಾಗಿಯಾದ ಸಹಸ್ರಾರು ಜನ; ಸಂಭ್ರಮಿಸಿದ ವಿದೇಶಿಗರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಮಾರ್ಚ್ 2019, 20:00 IST
Last Updated 3 ಮಾರ್ಚ್ 2019, 20:00 IST
ಹಂಪಿ ಉತ್ಸವಕ್ಕೆ ಭಾನುವಾರ ಸಂಜೆ ಜನಸಾಗರವೇ ಹರಿದು ಬಂತುಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಹಂಪಿ ಉತ್ಸವಕ್ಕೆ ಭಾನುವಾರ ಸಂಜೆ ಜನಸಾಗರವೇ ಹರಿದು ಬಂತುಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಹೊಸಪೇಟೆ:ಧ್ವನಿ, ಬೆಳಕಿನಲ್ಲಿ ಮಿಂದೆದ್ದ ಸ್ಮಾರಕಗಳು, ಬಾಣ ಬಿರುಸುಗಳ ಚಿತ್ತಾರದ ನಡುವೆ ಎರಡು ದಿನಗಳ ಹಂಪಿ ಉತ್ಸವಕ್ಕೆ ಭಾನುವಾರ ರಾತ್ರಿ ವಿರೂಪಾಕ್ಷನ ಸನ್ನಿಧಿಯಲ್ಲಿ ವಿಧ್ಯುಕ್ತ ತೆರೆ ಬಿತ್ತು.

ಉತ್ಸವದ ಪ್ರಯುಕ್ತ ತುಂಗಭದ್ರಾ ನದಿ ತಟದ ಪಂಪಾ ಕ್ಷೇತ್ರದಲ್ಲಿ ಜಾತ್ರೆಯ ವಾತಾವರಣ ಮನೆ ಮಾಡಿತ್ತು. ಸ್ಥಳೀಯರು, ಅನ್ಯ ರಾಜ್ಯದವರು ಹಾಗೂ ವಿದೇಶಿಯರು ಉತ್ಸವದಲ್ಲಿ ಭಾಗಿಯಾಗಿ ಪ್ರತಿಯೊಂದು ಕ್ಷಣವನ್ನು ಆನಂದಿಸಿದರು. ಅವರ ಉತ್ಸಾಹಕ್ಕೆ ಬಿರು ಬಿಸಿಲು ಅಡ್ಡಿಯಾಗಲಿಲ್ಲ.

ಸ್ಥಳೀಯ ಹಾಗೂ ರಾಜ್ಯದ ನಾನಾ ಭಾಗದ ಸಾವಿರಕ್ಕೂ ಹೆಚ್ಚು ಕಲಾವಿದರು ವಿವಿಧ ಪ್ರಕಾರದ ಕಲೆಯನ್ನು ಐದು ವೇದಿಕೆಗಳ ಮೇಲೆ ಅನಾವರಣಗೊಳಿಸಿ, ಸೇರಿದ ಜನಸ್ತೋಮದ ಆಯಾಸವನ್ನು ದೂರ ಮಾಡಿದರು. ಶಾಸ್ತ್ರೀಯ ಸಂಗೀತ, ಫ್ಯೂಜನ್‌, ರಾಕ್‌, ಜನಪದ, ವಚನ ಸಂಗೀತ, ದಾಸಪದ, ಹಾಸ್ಯಗೋಷ್ಠಿ, ಯಕ್ಷಗಾನ, ರಸಮಂಜರಿ ಹೀಗೆ ಹಲವು ಕಲೆಗಳಿಗೆ ಉತ್ಸವ ವೇದಿಕೆ ಕಲ್ಪಿಸಿತ್ತು. ಜನ ಅವರಿಗಿಷ್ಟವಾದ ವೇದಿಕೆಗಳಲ್ಲಿ ಕುಳಿತುಕೊಂಡು ಕಾರ್ಯಕ್ರಮ ಆಸ್ವಾದಿಸಿದರು.

ADVERTISEMENT

ಕುಸ್ತಿ, ತೂಕ ಎತ್ತುವ ಸ್ಪರ್ಧೆ, ಗುಂಡೆತ್ತುವ ಸ್ಪರ್ಧೆ, ತೆಪ್ಪ ಓಡಿಸುವ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಕೃಷಿ ಮೇಳ, ಆಹಾರ ಉತ್ಸವ, ಪುಸ್ತಕ ಮೇಳಕ್ಕೂ ಜನಸಾಗರ ಹರಿದು ಬಂದಿತ್ತು. ಭಾನುವಾರ ರಜಾ ದಿನವಾಗಿದ್ದರಿಂದ ಮೊದಲ ದಿನಕ್ಕಿಂತ ಹೆಚ್ಚಿನ ಜನ ಹಂಪಿಗೆ ಧಾವಿಸಿದ್ದರು. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಪರದಾಡಿದರು.

ಮಕ್ಕಳಿಂದ ಹಿರಿಯ ನಾಗರಿಕರ ವರೆಗೆ ಎಲ್ಲರೂ ಹಗಲಿನಲ್ಲಿ ಹಂಪಿ ಪರಿಸರದಲ್ಲಿ ಓಡಾಡಿ, ಸ್ಮಾರಕಗಳು, ದೇಗುಲಗಳು, ವಿವಿಧ ಸ್ಪರ್ಧೆಗಳನ್ನು ಕಣ್ತುಂಬಿಕೊಂಡರು. ರಾತ್ರಿ ವರೆಗೆ ಕುಳಿತುಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ವಿದೇಶಿಯರು ಕೈ ಮೇಲೆ ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸಿದರು. ಸ್ಥಳೀಯ ಯುವತಿಯರು ರಂಗೋಲಿ ಬಿಡಿಸುತ್ತಿರುವುದನ್ನು ನೋಡಿ ಆನಂದಿಸಿದರು. ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದರು. ಮೊಬೈಲ್‌ ತೆಗೆದುಕೊಂಡು ಸಂಭ್ರಮಿಸಿದರು. ಕೆಲ ವಿದೇಶಿ ಪ್ರವಾಸಿಗರು ಉತ್ಸವಕ್ಕೆಂದು ಬಂದು ಸ್ಥಳೀಯರೊಂದಿಗೆ ಕಾಲ ಕಳೆದದ್ದು ವಿಶೇಷವಾಗಿತ್ತು. ಹೀಗೆ ಎರಡು ದಿನಗಳ ಉತ್ಸವದ ಸಂಭ್ರಮ, ಕೆಂಡದಂತಹ ಬಿಸಿಲು ಎಲ್ಲರನ್ನೂ ಮರೆಸಿ, ಅದರಲ್ಲಿ ಭಾಗಿಯಾಗುವಂತೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.