
ಬೆಂಗಳೂರು: ‘ರೈತ ಸಂತೆ’ ಮಾದರಿಯಲ್ಲಿ ಕೈಮಗ್ಗ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮತ್ತು ನೇಕಾರಿಕೆಯಿಂದ ವಿಮುಖರಾಗುತ್ತಿರುವ ಯುವ ಜನರನ್ನು ಮತ್ತೆ ಆಕರ್ಷಿಸಲು ಸ್ಟೈಫಂಡ್ ಸೌಲಭ್ಯ ನೀಡುವ ಅಂಶವನ್ನು ನೂತನ ಜವಳಿ ನೀತಿಗೆ ಸೇರಿಸಲು ಚಿಂತನೆ ನಡೆಸಲಾಗಿದೆ ಎಂದು ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಕೈಮಗ್ಗ ಕ್ಷೇತ್ರದ ಉತ್ತೇಜನಕ್ಕೆ ನೂತನ ಜವಳಿ ನೀತಿಯಲ್ಲಿ ಸೇರಿಸಬೇಕಾದ ಅಂಶಗಳ ಬಗ್ಗೆ ಸಲಹೆ ಪಡೆಯಲು ಕರೆದಿದ್ದ ಶಾಸಕರ ಸಭೆಯಲ್ಲಿ ಅವರು ಮಾತನಾಡಿದರು.
ಕೈಮಗ್ಗ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದೇ ಉದ್ದಿಮೆಯ ಅವನತಿಗೆ ಪ್ರಮುಖ ಕಾರಣ. ಇಳಕಲ್, ರಬಕವಿ–ಬನಹಟ್ಟಿ, ದೊಡ್ಡಬಳ್ಳಾಪುರ ಸೇರಿದಂತೆ ಅತಿ ಹೆಚ್ಚು ಕೈಮಗ್ಗ ಉತ್ಪನ್ನಗಳ ತಯಾರಿಕೆ ಪ್ರದೇಶಗಳಲ್ಲಿ ನೇಕರಾರರೇ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರ ಸಂತೆ ಮಾದರಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿ ಸ್ಥಾಪನೆ ಮಾದರಿಯಲ್ಲಿ ಜವಳಿ ಇಲಾಖೆಯಿಂದಲೂ ಆವರ್ತ ನಿಧಿ ಸ್ಥಾಪನೆ ಮಾಡಬೇಕು ಎಂಬ ಸಲಹೆ ಸೂಕ್ತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು ಎಂದರು.
‘ರಾಜ್ಯದಲ್ಲಿ ಉತ್ಪಾದನೆಯಾಗುವ ರೇಷ್ಮೆ ಸೀರೆಗಳನ್ನು ಹೊರ ರಾಜ್ಯದವರು ಕಡಿಮೆ ಬೆಲೆಗೆ ಖರೀದಿಸಿ ಅವರದ್ದೇ ಬ್ರ್ಯಾಂಡ್ ಸೃಷ್ಟಿಸಿ ಮತ್ತೆ ನಮ್ಮ ರಾಜ್ಯದಲ್ಲೇ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ವ್ಯವಸ್ಥೆ ತಪ್ಪಿಸಿ ನಮ್ಮ ನೇಕಾರರೇ ಬ್ರ್ಯಾಂಡ್ ಸೃಷ್ಟಿಸುವ ವ್ಯವಸ್ಥೆ ಆಗಬೇಕಿದೆ. ಇದಕ್ಕೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ’ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಶಾಸಕ ಎಂ.ವೈ.ಪಾಟೀಲ, ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ, ವೆಂಕಟರಮಣಪ್ಪ ಅವರು ಸಲಹೆ ನೀಡಿದರು.
ದೊಡ್ಡಬಳ್ಳಾಪುರ ನೇಕಾರ ಸಂಘಟನೆಯ ಮುಖಂಡರು ಮಾತನಾಡಿ, ಸೂರತ್ ಸೀರೆಗಳ ಪ್ರಭಾವದಿಂದ ದೊಡ್ಡಬಳ್ಳಾಪುರದ ಕೈಮಗ್ಗ ನೇಕಾರರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ, ಪವರ್‌ಲೂಮ್ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಮನವಿ ಮಾಡಿದರು.
ಕೈಮಗ್ಗ ನೇಕಾರರ ಹಿತರಕ್ಷಣೆಗೆ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರದ ಬಳಿ ಶಾಸಕರೊಂದಿಗೆ ನಿಯೋಗ ಒಯ್ಯಲು ನಿರ್ಧರಿಸಲಾಗಿದೆ.–ಶಿವಾನಂದ ಪಾಟೀಲ, ಜವಳಿ ಸಚಿವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.