ADVERTISEMENT

Hate Speech Bill: ‘ದ್ವೇಷ ಭಾಷಣ’ ಮಸೂದೆಗೆ ಮೇಲ್ಮನೆಯಲ್ಲೂ ಅಂಗೀಕಾರ

ಮಸೂದೆ ಪ್ರತಿ ಹರಿದು ವಿಪಕ್ಷಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧ</p></div>

ಬೆಳಗಾವಿಯ ಸುವರ್ಣ ವಿಧಾನಸೌಧ

   

ಸುವರ್ಣ ವಿಧಾನಸೌಧ (ಬೆಳಗಾವಿ): ವಿರೋಧ ಪಕ್ಷಗಳ ಸದಸ್ಯರ ತೀವ್ರ ಆಕ್ರೋಶ, ಗದ್ದಲ ಮಧ್ಯೆಯೇ, ದ್ವೇಷಭಾಷಣ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸುವ ಮಸೂದೆಗೆ ವಿಧಾನ ಪರಿಷತ್ತಿನಲ್ಲಿ ಸರ್ಕಾರ ಶುಕ್ರವಾರ ಅಂಗೀಕಾರ ಪಡೆಯಿತು. 

‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆಯನ್ನು ವಿಧಾನಪರಿಷತ್‌ನಲ್ಲಿ ಪರ್ಯಾಲೋಚನೆಗೆ ಮಂಡಿಸಿದಾಗ, ಬಿಜೆಪಿ–ಜೆಡಿಎಸ್ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು.ಮಸೂದೆಯ ಪ್ರತಿ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ, ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ಮಸೂದೆ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿಯ ಸಿ.ಟಿ.ರವಿ, ‘ದ್ವೇಷ ಭಾಷಣದ ಹೆಸರಲ್ಲಿ ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ನನ್ನನ್ನೇ ಜೈಲಿಗೆ ಹಾಕುವ ಪ್ರಯತ್ನ ಮಾಡಿದ್ದರು. ಇನ್ನು ಮಸೂದೆ ಬಂದರೆ ತಮ್ಮ ವಿರುದ್ಧ ಟೀಕೆ ಮಾಡಿದವರನ್ನು ಬಂಧಿಸುವ ಕೆಲಸ ಮಾಡುತ್ತಾರೆ’ ಎಂದು ದೂರಿದರು.

‘ಒಂದು ಧರ್ಮದಲ್ಲಿ, ದೇವರನ್ನು ನಂಬದವರನ್ನು ಕಾಫೀರರು ಎನ್ನುತ್ತಾರೆ. ಅವರನ್ನು ಕೊಲ್ಲಬೇಕು ಎಂದಿದೆ. ಈ ವಿಚಾರದ ಬಗ್ಗೆ ಮಾತನಾಡಿದರೂ, ದ್ವೇಷಭಾಷಣ ಎಂದು ಜೈಲಿಗೆ ಹಾಕಲು ಮಸೂದೆ ಅವಕಾಶ ಮಾಡಿಕೊಡುತ್ತದೆ’ ಎಂದು ರವಿ ಹೇಳಿದರು. ಅವರ ಮಾತಿಗೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ
ವ್ಯಕ್ತಪಡಿಸಿದರು.

‘ದ್ವೇಷ ಭಾಷಣ ನಿಯಂತ್ರಣಕ್ಕೆ ಸರ್ಕಾರ ಮಸೂದೆ ಮಂಡಿಸಿದೆ. ಇಲ್ಲೇ ದ್ವೇಷಭಾಷಣ ನಡೆಯುತ್ತಿದೆ. ನೀವೇ ಪ್ರಚೋದನಾಕಾರಿ ಭಾಷಣ ಮಾಡಿದರೆ ಹೇಗೆ. ಮೊದಲು ಪ್ರಚೋದನಕಾರಿಯಾಗಿ ಮಾತನಾಡುವುದನ್ನು ಕಡಿಮೆ ಮಾಡು’ ಎಂದು ಸಭಾಪತಿ ಬಸವರಾಜ ಹೊರಟ್ಟಿ, ರವಿಗೆ ಬುದ್ಧಿಮಾತು ಹೇಳಿದರು. 

ಅದಕ್ಕೆ ರವಿ ಅವರು, ‘ಮಸೂದೆ ಮೇಲೆ ಮಾತನಾಡುವಾಗ ಸಮಯದ ನಿರ್ಬಂಧವಿಲ್ಲ. ನೀವು ನಿರ್ಬಂಧ ಹೇರಬಾರದು. ಈ ಸದನಕ್ಕೆ ನಾನೂ ಶಾಶ್ವತ ಅಲ್ಲ, ನೀವೂ ಶಾಶ್ವತ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ
ದರು. ಕಾಂಗ್ರೆಸ್‌ನ ಸದಸ್ಯರು ರವಿ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರೂ ಎದ್ದುನಿಂತು ಸರ್ಕಾರದ ವಿರುದ್ಧ ಕೂಗಿದರು. ಆಡಳಿತ–ವಿರೋಧ ಪಕ್ಷಗಳ ಸದಸ್ಯರ ಮಾತಿನ ಗದ್ದಲ ಹೆಚ್ಚಾದ ಕಾರಣ ಸಭಾಪತಿ ಕಲಾಪವನ್ನು ಮುಂದೂಡಿದರು.

ಕಲಾಪ ಮತ್ತೆ ಆರಂಭವಾದಾಗ ಕಾಂಗ್ರೆಸ್‌ನ ಸದಸ್ಯರು, ‘ಸಿ.ಟಿ. ರವಿ ಅವರು ಕ್ಷಮೆ ಕೇಳಬೇಕು’ ಎಂದು ಪಟ್ಟು ಹಿಡಿದರು. ಬಸವರಾಜ ಹೊರಟ್ಟಿ ಅವರು, ‘ಅವರ ಮಾತನ್ನು ಪರಿಶೀಲಿಸಿ, ಅವು ಅಸಾಂವಿಧಾನಿಕವಾಗಿ ಇದ್ದರೆ ಕಡತದಿಂದ ತೆಗೆಸುತ್ತೇನೆ’ ಎಂದು ಹೇಳಿದರು.

ಬಿಜೆಪಿಯ ಪ್ರತಾಪ ಸಿಂಹ ನಾಯಕ್‌, ಕೇಶವ ಪ್ರಸಾದ್‌, ಭಾರತಿ ಶೆಟ್ಟಿ ಅವರು, ಸಂವಿಧಾನ, 19(1)ಎ
ವಿಧಿಯಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲೇಖಿಸಿದರು. ಸರ್ಕಾರವು ತರಲು ಹೊರಟಿರುವ ಈ ಮಸೂದೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ದ್ವೇಷ ರಾಜಕಾರಣಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌, ‘ಸಂವಿಧಾನವನ್ನು ವಿರೋಧಿಸುವ ಬಿಜೆಪಿ ನಾಯಕರ ಬಾಯಿಯಲ್ಲೂ, ಸಂವಿಧಾನ ಕುರಿತು ಮಾತನಾಡಿಸುವಂತಹ ಸ್ಥಿತಿಯನ್ನು ಈ ಮಸೂದೆ ತಂದಿದೆ’ ಎಂದು ಕಾಲೆಳೆದರು.

‘ಸಂವಿಧಾನದ ಕೆಲವು ಆಯ್ದ ಭಾಗಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು ಮಾತನಾಡುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ. 19(1)ಎ ವಿಧಿಯ ನಂತರ ಬರುವ 19(2)ಎ ವಿಧಿಯ ಬಗ್ಗೆ ಅವರು ಮಾತನಾಡುವುದೇ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾದರೆ, ಅದನ್ನು ನಿರ್ಬಂಧಿಸುವ ಅಧಿಕಾರವನ್ನು ಈ ವಿಧಿ ಸರ್ಕಾರಕ್ಕೆ ನೀಡುತ್ತದೆ’ ಎಂದು ಪ್ರತಿಪಾದಿಸಿದರು.

ಸುಪ್ರೀಂ ನಿರ್ದೇಶನವಿದೆ: ಪರಮೇಶ್ವರ

ದ್ವೇಷ ಭಾಷಣ ತಡೆಗೆ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ದ್ವೇಷ ಭಾಷಣ ಮಾಡುವವರು, ಸಮಾಜದ ಸಾಮರಸ್ಯ ಕದಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸುಪ್ರೀಂಕೋರ್ಟ್‌ ನಿರ್ದೇಶನವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. 

ಬುದ್ಧಿವಂತರು ಎಂದುಕೊಂಡ ಬಿಜೆಪಿ ಸದಸ್ಯರು ದೇಶದ ಕೋರ್ಟ್‌ ತೀರ್ಪು, ಕಾನೂನು ಪ್ರಕ್ರಿಯೆ ಅರ್ಥ ಮಾಡಿಕೊಳ್ಳದೆ ವಿರೋಧ ಮಾಡುತ್ತಿದ್ದಾರೆ. ಧರ್ಮ ಎಂದರೆ ಎಲ್ಲ ಧರ್ಮಗಳೂ ಒಳಗೊಳ್ಳುತ್ತವೆ. ಇರುವ ಕಾನೂನುಗಳಲ್ಲಿ ದ್ವೇಷ ಭಾಷಣ ಮಾಡಿದವರಿಗೆ ಜಾಮೀನು ನೀಡಲು ಅವಕಾಶವಿದೆ. ಹಾಗಾಗಿ, ಜಾಮೀನು ನೀಡದಂತಹ ಕಾನೂನು ಬೇಕಿದೆ ಎಂದರು.

ಕಾಯ್ದೆಯ ದುರುಪಯೋಗವೇ ಹೆಚ್ಚು: ಛಲವಾದಿ

ಪ್ರಸ್ತುತ ಅಸ್ತಿತ್ವದಲ್ಲಿರುವ ಕಾನೂನುಗಳನ್ನೇ ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಈಗ ತರಲು ಉದ್ದೇಶಿಸಿರುವ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಯ ದುರುಪಯೋಗ ಆಗುವುದಿಲ್ಲ ಎನ್ನುವ ಗ್ಯಾರಂಟಿ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದರೂ ನನ್ನ ವಿರುದ್ಧವೇ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದರು. ಈ ಮಸೂದೆಯಲ್ಲೂ ಕಂದಾಯ, ಪೊಲೀಸ್‌ ಅಧಿಕಾರಿಗಳಿಗೇ ಜಾರಿಯ ಹೊಣೆ ನೀಡಲಾಗಿದೆ ಎಂದರು.

ಕಾರಾಗೃಹಗಳಲ್ಲಿ ಪೋಕ್ಸೊ ಪ್ರಕರಣದ ಆರೋಪಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ನಾರಾಯಣಸ್ವಾಮಿ ಉಲ್ಲೇಖಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌, ಪ್ರಭಾವಿ ರಾಜಕಾರಣಗಳ ಮೇಲೆ ಪೋಕ್ಸೊ ಪ್ರಕರಣ ಇದ್ದರೂ, ಹೊರಗೆ ಇದ್ದಾರೆ ಎಂದು ಕಾಲೆಳೆದರು.

13 ಪ್ರಕರಣ ಇದ್ದರೂ ಹೊರಗಿದ್ದಾರೆ: ಹರಿಪ್ರಸಾದ್

‘ದಕ್ಷಿಣ ಕನ್ನಡದ ಇವರದ್ದೇ ನಾಯಕರೊಬ್ಬರ ವಿರುದ್ಧ ದ್ವೇಷ ಭಾಷಣದ 13 ಪ್ರಕರಣಗಳು ಇವೆ. ಆದರೂ ಅವರು ಹೊರಗೆ ಇದ್ದಾರೆ’ ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಅವರು, ಬಿಜೆಪಿ ಸದಸ್ಯರನ್ನು ಉದ್ದೇಶಿಸಿ ಹೇಳಿದರು.

‘ಅವರ ಭಾಷಣ ಕೇಳಿ ಕೇಸರಿ ಶಾಲು ತೊಟ್ಟು, ತಳ ಸಮುದಾಯದ ಹುಡುಗರು ಕೊಲೆಯಾಗಿದ್ದಾರೆ. ಇಂಥದ್ದನ್ನೆಲ್ಲಾ ತಡೆಯಲೆಂದೇ ಈ ಮಸೂದೆ ತರಲಾಗುತ್ತಿದೆ’ ಎಂದು ವಿವರಿಸಿದರು.

ಸರ್ಕಾರವನ್ನು ಟೀಕಿಸಿಸುವುದಕ್ಕೂ, ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಬರೆದಿದ್ದಕ್ಕೂ ಜೈಲಿಗೆ ಹೋಗಬೇಕಾದ ಸ್ಥಿತಿಯನ್ನು ಈ ಮಸೂದೆ ತರಲಿದೆ
ಕೇಶವ ಪ್ರಸಾದ್‌, ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ
ಸರ್ಕಾರವನ್ನು ಟೀಕಿಸಿದರೆ ಯಾರೂ ಜೈಲಿಗೆ ಹೋಗುವುದಿಲ್ಲ. ದ್ವೇಷ ಭಾಷಣ ಮಾಡಿದರೆ, ದ್ವೇಷ ಬಿತ್ತಿದರೆ ಹೋಗುತ್ತೀರಿ. ದ್ವೇಷ ಬಿತ್ತುವುದನ್ನು ಬಿಟ್ಟುಬಿಡಿ
ಎಂ.ನಾಗರಾಜ ಯಾದವ್‌, ಕಾಂಗ್ರೆಸ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.