
ಬೆಳಗಾವಿಯ ಸುವರ್ಣ ವಿಧಾನಸೌಧ
ಸುವರ್ಣವಿಧಾನಸೌಧ (ಬೆಳಗಾವಿ): ಬಿಜೆಪಿ ಸದಸ್ಯರ ತೀವ್ರ ವಿರೋಧದ ನಡುವೆಯೇ, ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳನ್ನು ನಿರ್ಬಂಧಿಸುವ ಮಸೂದೆಯನ್ನು ಸರ್ಕಾರ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿತು.
ಗೃಹ ಸಚಿವ ಜಿ.ಪರಮೇಶ್ವರ ಅವರು ಮಸೂದೆ ಮಂಡಿಸಿದರು. ಆಗ ಬಿಜೆಪಿಯ ಎಲ್ಲ ಸದಸ್ಯರು ಎದ್ದು ನಿಂತು ಪ್ರತಿಭಟಿಸಿ, ಮಸೂದೆ ಮಂಡಿಸಬಾರದು ಎಂದು ಆಗ್ರಹಿಸಿದರು. ಸದನದ ಹೊರಗೂ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಮಸೂದೆಯ ಪರ– ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ.
ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಆಧರಿಸಿ ದ್ವೇಷದ ಭಾಷಣ ಮಾಡುವವರನ್ನು ನಿರ್ಬಂಧಿಸಲು ಈ ಮಸೂದೆ ತರಲಾಗಿದೆ. ದ್ವೇಷಾಪರಾಧ ಎಸಗಿದವರಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸುವ ಅಂಶ ಮಸೂದೆಯ ಭಾಗವಾಗಿದೆ.
ಮಂಡನೆಯಾದ ಮಸೂದೆಗಳು
ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಮಸೂದೆ, ಔಷಧ ಮತ್ತು ಪ್ರಸಾಧನ ಸಾಮಗ್ರಿ (ತಿದ್ದುಪಡಿ) ಮಸೂದೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ ತಿದ್ದುಪಡಿ) ಮಸೂದೆ ಸೇರಿ ಒಟ್ಟು 13 ಮಸೂದೆಗಳನ್ನು ಮಂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.