ADVERTISEMENT

ಸಾಹಿತ್ಯ ಸಮ್ಮೇಳನ: ಕಣ್ಣು ಕೋರೈಸುವ ಬೆಳಕಿನ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 16:02 IST
Last Updated 4 ಜನವರಿ 2023, 16:02 IST
   

ಹಾವೇರಿ: 86ನೇ ನುಡಿಜಾತ್ರೆಗೆ ಹಾವೇರಿ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಪ್ರಮುಖ ವೃತ್ತ, ರಸ್ತೆ ಮತ್ತು ಕಟ್ಟಡಗಳಿಗೆ ‘ಮೈಸೂರು ದಸರಾ ಮಾದರಿ ದೀಪಾಲಂಕಾರ’ ಮಾಡಿದ್ದು, ಕಂಗೊಳಿಸುತ್ತಿವೆ.

ಹೊಸಮನಿ ಸಿದ್ದಪ್ಪ ವೃತ್ತ, ರಾಣಿ ಚನ್ನಮ್ಮ ವೃತ್ತ, ವಾಲ್ಮೀಕಿ ವೃತ್ತ, ಸುಭಾಷ್‌ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌, ಗಾಂಧಿ ಸರ್ಕಲ್‌, ಬಸವೇಶ್ವರ ಸರ್ಕಲ್‌, ಜೆ.ಎಚ್‌.ಪಟೇಲ್‌ ವೃತ್ತ, ಎಂ.ಎಂ. ಸರ್ಕಲ್‌, ಜಯಪ್ರಕಾಶ ನಾರಾಯಣ ಸರ್ಕಲ್‌, ಸಂಗೂರ ಕರಿಯಪ್ಪ ಸರ್ಕಲ್‌ ಮುಂತಾದ ವೃತ್ತಗಳಲ್ಲಿ ವಿದ್ಯುದ್ದೀಪ ಮತ್ತು ಕನ್ನಡ ಬಾವುಗಳ ಅಲಂಕಾರ ಮಾಡಲಾಗಿದೆ.

ಸಂಗೂರ ಕರಿಯಪ್ಪ ವೃತ್ತದಿಂದ ಅಜ್ಜಯ್ಯನ ಗುಡಿ ದೇಗುಲದವರೆಗಿನ ಮರಗಳು, ವೃತ್ತಗಳು, ರಸ್ತೆ ವಿಭಜಕ, ಪ್ರಯಾಣಿಕರ ತಂಗುದಾಣ, ಗೋಡೆಗಳು, ವಿದ್ಯುತ್‌ ಕಂಬಗಳಿಗೆ ಕನ್ನಡ ಬಾವುಟ ಅಳವಡಿಕೆ, ಬಣ್ಣದ ಸಿಂಗಾರ, ವಿದ್ಯುದ್ದೀಪಗಳ ಚಿತ್ತಾರವನ್ನು ಮಾಡಲಾಗಿದೆ. ರಾತ್ರಿ ವೇಳೆ ರಸ್ತೆ ಮತ್ತು ವೃತ್ತಗಳು ಕಂಗೊಳಿಸುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

‘ಕಳೆದ 9 ವರ್ಷಗಳಿಂದ ಮೈಸೂರು ದಸರಾ, ಮಲೆಮಹದೇಶ್ವರ ಜಾತ್ರೆ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ಕಾರ್ಕಳ ಉತ್ಸವ, ಹಂಪಿ ಉತ್ಸವ ಹಾಗೂ ಬೆಂಗಳೂರಿನ ಗಣೇಶ ಉತ್ಸವ ಸೇರಿದಂತೆ ಪ್ರಮುಖ ಉತ್ಸವ, ಜಾತ್ರೆಗಳಿಗೆ ದೀಪಾಲಂಕಾರ ಮಾಡಿರುವ ಅನುಭವ ನಮಗಿದೆ’ ಎಂದು ಗುತ್ತಿಗೆದಾರ ವಿ. ಮೋಹನ್‌ಕುಮಾರ್‌ ತಿಳಿಸಿದರು.

ಹೂವಿನ ಅಲಂಕಾರ:

‘ಹಾವೇರಿ ನಗರದ ವೃತ್ತಗಳಿಗೆ, ಡಿವೈಡರ್‌ಗಳಿಗೆ, ಪ್ರವೇಶ ದ್ವಾರಗಳಿಗೆ ಹಾಗೂ ಬಸ್‌ ನಿಲ್ದಾಣದ ಎದುರುಗಡೆ ಇರುವ ಸ್ಥಳಗಳಲ್ಲಿ ವಿವಿಧ ಹೂವುಗಳ ಅಲಂಕಾರ ಮಾಡುವುದಕ್ಕೆ ಗುಲಾಬಿ, ಸಾಲ್ವಿಯಾ, ಪೆಟೋನಿಯಾ, ಪ್ಲಾಕ್ಸ್‌, ಗೋಲ್ಡನ್‌ ರಾಡ್‌ ಮುಂತಾದ ಹೂವುಗಳನ್ನು ಬಳಸಲಾಗುತ್ತದೆ. ಜರ್ಬೆರಾ, ಆರ್ಕಿಡ್‌, ಅಂತೋರಿಯಂ, ಬರ್ಡ್‌ ಆಫ್‌ ಪ್ಯಾರಡೈಸ್‌, ಗ್ಲಾಡಿಯೋಲಸ್‌, ಕಾರ್ನೆಷನ್‌, ಲಿಲ್ಲಿ ಹೂವುಗಳಿಂದ ನಗರವನ್ನು ಅಲಂಕರಿಸಲಾಗುವುದು’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್‌. ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.