ADVERTISEMENT

ಹಾವೇರಿ: ಸಾಹಿತ್ಯ ಜಾತ್ರೆಯಲ್ಲಿ ವಸ್ತ್ರ ವೈಭವ, ಕೈಮಗ್ಗದ ವಸ್ತ್ರಗಳಿಗೆ ಬೇಡಿಕೆ

ಸಿದ್ದು ಆರ್.ಜಿ.ಹಳ್ಳಿ
Published 8 ಜನವರಿ 2023, 21:17 IST
Last Updated 8 ಜನವರಿ 2023, 21:17 IST
ಹಾವೇರಿಯ ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಯಲ್ಲಿ ಭಾನುವಾರ ಇಳಕಲ್‌ ಸೀರೆ ಖರೀದಿಸುತ್ತಿದ್ದ ಮಹಿಳೆಯರು – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ಹಾವೇರಿಯ ಸಾಹಿತ್ಯ ಸಮ್ಮೇಳನದ ವಾಣಿಜ್ಯ ಮಳಿಗೆಯಲ್ಲಿ ಭಾನುವಾರ ಇಳಕಲ್‌ ಸೀರೆ ಖರೀದಿಸುತ್ತಿದ್ದ ಮಹಿಳೆಯರು – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ   

ಹಾವೇರಿ: ಇಳಕಲ್ ಸೀರೆ, ಕೈಮಗ್ಗದ ವಸ್ತ್ರಗಳು, ಕನ್ನಡ ಅಂಗಿಗಳು, ಖಾದಿ ಬಟ್ಟೆಗಳಿಗೆ ಭಾರಿ ಬೇಡಿಕೆ ವ್ಯಕ್ತವಾಯಿತು. ಸಾಹಿತ್ಯ ಜಾತ್ರೆಯ ಕೊನೆಯ ದಿನ ಭಾನುವಾರ ವಸ್ತ್ರ ವೈಭೋಗ ಗರಿಗೆದರಿತ್ತು.

ನಗರದ ಹೊರವಲಯದಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆವರಣದ ವಾಣಿಜ್ಯ ಮಳಿಗೆಗಳಲ್ಲಿ ಬಟ್ಟೆ ಮಳಿಗೆಗಳದ್ದೇ ಕಾರುಬಾರು.

ಸೀರೆಗೆ ಮುಗಿಬಿದ್ದ ನಾರಿಯರು: ನೇಕಾರರು ನೇಯ್ದ ಇಳಕಲ್‌ ಸೀರೆಗಳನ್ನು ಕೊಳ್ಳಲು ನೀರೆಯರು ಮುಗಿಬಿದ್ದರು. ಕಸೂತಿ, ಚದುರಂಗ, ರಾಗಾವಳಿ, ಕರಿಚಂದ್ರಕಾಳಿ, ಪ್ಲೇನ್‌ ಮತ್ತು ಚೆಕ್ಸ್‌ ಸೀರೆಗಳು ಕಲಾತ್ಮಕ ಕಸೂತಿಯಿಂದ ಮನಸೂರೆಗೊಂಡವು. ಉತ್ತರ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಇಳಕಲ್‌ ಸೀರೆಗಳ ಮಾರಾಟದ ಭರಾಟೆಯನ್ನು ನೋಡಿದ ಯುವಕರು ‘ಇಳಕಲ್‌ ಸೀರೆ ಉಟ್ಕೊಂಡು’ ಹಾಡನ್ನು ಗುನುಗುತ್ತಿದ್ದರು.

ADVERTISEMENT

ಸೀರೆಗಳ ಸೆರಗಿನ ತುದಿಯಲ್ಲಿ ಹೆಣಿಗೆ, ಕೋಟಿಕಂಬ್ಳಿ, ಟೋಪಿ ತೆನೆ, ಜೋಳದ ತೆನೆ, ರಂಪ (ಗಿರಿಶ್ರೇಣಿ) ಇತ್ಯಾದಿಗಳ ಹೆಣಿಗೆ ವಿನ್ಯಾಸಗಳು ಮಹಿಳೆಯರನ್ನು ಆಕರ್ಷಿಸಿದವು. 'ಬಣ್ಣದ ಪಟ್ಟೆಗಳು', 'ಆಯತಾಕೃತಿ' ಹಾಗೂ 'ಚೌಕಳಿ ಆಕಾರದ ವಿನ್ಯಾಸಗಳು ಸಾಂಪ್ರದಾಯಿಕ ಮಹತ್ವವನ್ನು ಸಾರಿದವು.

₹1 ಲಕ್ಷ ವ್ಯಾಪಾರ: ‘ಸಾಹಿತ್ಯ ಸಮ್ಮೇಳನದ ಎರಡು ದಿನಗಳಲ್ಲಿ ₹1 ಲಕ್ಷ ಮೌಲ್ಯದ ಇಳಕಲ್‌ ಸೀರೆಗಳನ್ನು ಮಾರಾಟ ಮಾಡಿದ್ದೇವೆ. ನಮ್ಮಲ್ಲಿ ₹650ರಿಂದ ₹12 ಸಾವಿರದವರೆಗಿನ ದರದ ಸೀರೆಗಳಿವೆ. ಸಮ್ಮೇಳನಕ್ಕೆ ₹5 ಲಕ್ಷ ಮೌಲ್ಯದ ಸೀರೆಗಳನ್ನು ತಂದಿದ್ದೇನೆ. ಕೊನೆಯ ದಿನ ₹1 ಲಕ್ಷ ವ್ಯಾಪಾರವಾಗುವ ನಿರೀಕ್ಷೆಯಿದೆ’ ಎಂದು ಪೂಜಾ ಹ್ಯಾಂಡ್‌ಲೂಮ್ಸ್‌ನ ವ್ಯಾಪಾರಿ ಭರತೇಶ ಒಂದಕುದರಿ ತಿಳಿಸಿದರು.

ಅಸ್ಸಾಂ ಸೀರೆಗಳು: ‘ವಾಣಿಜ್ಯ ಮಳಿಗೆಗಳಲ್ಲಿ ಅಸ್ಸಾಂ ಸೀರೆಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಮುಂಗಾರಿ, ಮಟ್ಕಾ ಸಿಲ್ಕ್‌, ಟಸ್ಸರ್‌, ಮಲ್‌ಬರಿ ಹೆಸರಿನ ಸೀರೆಗಳನ್ನು ತಂದಿದ್ದೇನೆ. ₹3500 ಮೌಲ್ಯದ ಸೀರೆಯನ್ನು ₹2800ಕ್ಕೆ ರಿಯಾಯಿತಿ ದರದಲ್ಲಿ ಮಾರುತ್ತಿದ್ದೇನೆ’ ಎಂದು ವ್ಯಾಪಾರಿ ಬ್ರಿಜೇಶ್‌ ಯಾದವ್‌ ತಿಳಿಸಿದರು.

ಮಹಾಲಿಂಗಪುರದ ಕೈಮಗ್ಗದ ಕಾಟನ್‌ ಸೀರೆಗಳು, ಕುಸುಗಲ್‌ನ ಕಾಟನ್‌ ಶರ್ಟ್‌ಗಳು, ಖಾದಿ ಜುಬ್ಬಾ, ಪೈಜಾಮ, ಟವಲ್‌, ಬೆಡ್‌ಶೀಟ್‌, ಕರವಸ್ತ್ರ ಮುಂತಾದ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ದೊರೆಯಿತು. ಅಕ್ಷರ ಜಾತ್ರೆಗೆ ಬಂದ ದಂಪತಿಗಳು ಒಂದು ಕೈಯಲ್ಲಿ ಪುಸ್ತಕ, ಮತ್ತೊಂದು ಕೈಯಲ್ಲಿ ಬಣ್ಣ ಬಣ್ಣದ ಉಡುಪುಗಳನ್ನು ತೆಗೆದುಕೊಂಡು ಮಕ್ಕಳೊಂದಿಗೆ ಮನೆಗೆ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.

ವಾಣಿಜ್ಯ ಮಳಿಗೆಗಳಾಚೆ ಅಂದರೆ ಮೈದಾನದಲ್ಲೂ ದೊಡ್ಡ ರಿಯಾಯಿತಿ ದರದಲ್ಲಿ ಮಕ್ಕಳ ಮತ್ತು ದೊಡ್ಡವರ ಬಟ್ಟೆಗಳು ಬಿಕರಿಯಾದವು. ₹100, ₹200ಕ್ಕೆ ಸಿಕ್ಕ ಪ್ಯಾಂಟ್‌, ಶರ್ಟ್‌, ಟೀಶರ್ಟ್‌, ಜಾಕೆಟ್‌ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.