ವಿಮಾನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಅಚ್ಚರಿ ನೀಡಿದ ಏರ್ ಇಂಡಿಯಾ ಸಿಬ್ಬಂದಿ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರು ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಏರ್ ಇಂಡಿಯಾ ಸಿಬ್ಬಂದಿ ದೇವೇಗೌಡರಿಗೆ ಅಚ್ಚರಿ ನೀಡಿದ್ದಾರೆ.
ಹೌದು, ನಾಳೆ ಮೇ 18 ರಂದು ದೇವೆಗೌಡರ 92ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಿಬ್ಬಂದಿ (AI 2813) ದೇವೇಗೌಡರಿಗೆ ಮುಂಚಿತವಾಗಿ ಶುಭಾಶಯ ಸಲ್ಲಿಸಲು ವಿಮಾನದಲ್ಲಿಯೇ ಜನ್ಮದಿನ ಆಚರಿಸಿದ್ದಾರೆ. ಕೇಕ್ ಕತ್ತರಿಸಿ ಮಾಜಿ ಪ್ರಧಾನಿಯವರಿಗೆ ಶುಭಾಶಯ ತಿಳಿಸಿ ಸಂಭ್ರಮಿಸಿದ್ದಾರೆ.
ಸುಮಾರು 35 ಸಾವಿರ ಅಡಿ ಎತ್ತರದಲ್ಲಿ ಮಾಜಿ ಪ್ರಧಾನಿಗಳ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಇದು ನಮಗೆ ತುಂಬಾ ಸಂತಸ ತರುವ ವಿಷಯ ಎಂದು ಪತ್ರವನ್ನೂ ಏರ್ ಇಂಡಿಯಾ ಹಂಚಿಕೊಂಡಿದೆ.
ಸಿಬ್ಬಂದಿ ತೋರಿಸಿದ ಪ್ರೀತಿ ಕಾಳಜಿಯನ್ನು ದೇವೇಗೌಡರು ಕೊಂಡಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಏರ್ ಇಂಡಿಯಾಗೆ ಧನ್ಯವಾದ ಸಲ್ಲಿಸಿದ್ದಾರೆ.
1933ರ ಮೇ 18ರಂದು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದ್ದ ದೇವೇಗೌಡರು 1996–97ರ ಅವಧಿಯಲ್ಲಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಈ ಇಳಿ ವಯಸ್ಸಿನಲ್ಲೂ ರಾಜ್ಯಸಭಾ ಸದಸ್ಯರಾಗಿ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.