ADVERTISEMENT

ದೇವೇಗೌಡ ಮತ್ತೆ ರಾಜ್ಯಸಭೆಗೆ?: ರಾಜಕೀಯ ವಲಯದಲ್ಲಿ ಆರಂಭವಾದ ಚರ್ಚೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 20:39 IST
Last Updated 25 ಫೆಬ್ರುವರಿ 2026, 20:39 IST
   

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಸೇರಿ ನಾಲ್ವರು ರಾಜ್ಯಸಭಾ ಸದಸ್ಯರ ಅವಧಿ ಜೂನ್‌ನಲ್ಲಿ ಮುಗಿಯಲಿದ್ದು, ದೇವೇಗೌಡ ಮತ್ತೊಂದು ಅವಧಿಗೆ ರಾಜ್ಯ ಸಭೆಗೆ ಪ್ರವೇಶ ಪಡೆಯುವರೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ದೇವೇಗೌಡರಲ್ಲದೆ, ಕಾಂಗ್ರೆಸ್‌ನ ಎಂ.ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ನಾರಾಯಣ ಕೊರಗಪ್ಪ ಮತ್ತು ಈರಣ್ಣ ಕಡಾಡಿ ಅವರ ಅವಧಿ ಜೂನ್‌ 25ಕ್ಕೆ ಮುಗಿಯಲಿದೆ.

ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾ ಬಲದ ಪ್ರಕಾರ ತೆರವಾಗುವ ನಾಲ್ಕು ಸ್ಥಾನಗಳಲ್ಲಿ 3 ಸ್ಥಾನಗಳು ಕಾಂಗ್ರೆಸ್‌ಗೆ ಸಿಗಲಿವೆ. ಬಿಜೆಪಿಗೆ ಒಂದು ಸ್ಥಾನ ಸಿಗುವ ಸಾಧ್ಯತೆ ಇದೆ.

ADVERTISEMENT

93ರ ಇಳಿ ವಯಸ್ಸಿನ ದೇವೇಗೌಡರು→ ಮತ್ತೊಂದು ಅವಧಿಗೆ ರಾಜ್ಯಸಭೆ ಪ್ರವೇಶಿಸಲು ಉತ್ಸುಕ
ರಾಗಿದ್ದಾರೆ. ಆದರೆ, ಅವರ ಪಕ್ಷಕ್ಕೆ ಸಂಖ್ಯಾ ಬಲ ಇಲ್ಲದ ಕಾರಣ, ಬಿಜೆಪಿ ಸಹಾಯಹಸ್ತ ಚಾಚಿದರೆ ರಾಜ್ಯಸಭೆ ಪ್ರವೇಶಿಸಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ ವರಿಷ್ಠರದ್ದು.

ಈ ಕುರಿತು ದೇವೇಗೌಡರು ಆಸಕ್ತಿ ಹೊಂದಿರುವುದನ್ನು ಬಿಜೆಪಿಯ ರಾಜ್ಯ ಮುಖಂಡರೊಬ್ಬರು ಖಚಿತ ಪಡಿಸಿದ್ದಾರೆ.

ದೇವೇಗೌಡರು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ರೈತರ ಹಿತಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸಕ್ಕೂ ಅವರು ಪಾತ್ರರಾಗಿದ್ದಾರೆ. 

ದೇವೇಗೌಡರು ರಾಜ್ಯಸಭೆಯಲ್ಲಿದ್ದರೆ ರಾಜಕೀಯವಾಗಿಯೂ ಸಕ್ರಿಯರಾಗಿರು ತ್ತಾರೆ ಮತ್ತು ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಎನ್‌ಡಿಎ ಪರವಾಗಿ ಪ್ರಚಾರ ಮಾಡುವ ಸಾಧ್ಯತೆ ಇದೆ. ಇದರಿಂದ ಬಿಜೆಪಿ– ಜೆಡಿಎಸ್‌ ಎರಡಕ್ಕೂ ಅನುಕೂಲ ಆಗುತ್ತದೆ ಎಂಬ ಚರ್ಚೆ ಜೆಡಿಎಸ್‌ನಲ್ಲಿದೆ.

ಬಿಜೆಪಿ ತನ್ನ ಪಾಲಿನ ರಾಜ್ಯಸಭೆ ಸೀಟು ದೇವೇಗೌಡರಿಗೆ ಬಿಟ್ಟುಕೊಟ್ಟರೆ ಮುಂದಿನ ವಿಧಾನಸಭೆ ಚುನಾವಣೆ ವೇಳೆ ಹೆಚ್ಚಿನ ಕ್ಷೇತ್ರಗಳಿಗೆ ಬಿಜೆಪಿ ಜತೆ ಚೌಕಾಸಿ ನಡೆಸಲು ಕಷ್ಟವಾಗಬಹುದು ಎಂಬ ಕಳವಳ ಜೆಡಿಎಸ್‌ಗಿದೆ. ದೇವೇಗೌಡರು ಹಿಂದಕ್ಕೆ ಸರಿದರೆ ಹೆಚ್ಚಿನ ಸೀಟುಗಳಿಗೆ ಒತ್ತಡ ಹೇರಲು ಸಾಧ್ಯ ಎಂಬ ವಾದವೂ ಜೆಡಿಎಸ್‌ನಲ್ಲಿದೆ ಎಂದು ಮೂಲಗಳು ಹೇಳಿವೆ.

ದೇವೇಗೌಡರಿಗೆ ಮತ್ತೊಂದು ಅವಕಾಶ ನೀಡಲು ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ಒಪ್ಪಿಗೆಯೇ ಅಂತಿಮವಾಗುತ್ತದೆ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರ ಪಾತ್ರ ಕಡಿಮೆ. ಗೌಡರಿಗೆ ಅವಕಾಶ ನೀಡಲು ಮೋದಿಯವರು ಒಲವು ಹೊಂದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ, ರಾಜ್ಯಸಭೆಯಲ್ಲಿ ಇತ್ತೀಚಿನ ಎಲ್ಲ ಕಲಾಪಗಳಲ್ಲಿ ದೇವೇಗೌಡರು ಸಕ್ರಿಯವಾಗಿ ಭಾಗವಹಿಸಿದ್ದರು.  ಮೋದಿ ಅವರನ್ನು ಹಲವು ಬಾರಿ ಮುಕ್ತ ಕಂಠದಿಂದ ಶ್ಲಾಘನೆ ಮಾಡಿದ್ದಾರೆ. ದೇವೇಗೌಡರು ಇತ್ತೀಚೆಗೆ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆಯನ್ನೂ ನಡೆಸಿದ್ದಾರೆ.

ಅಲ್ಲದೇ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಆ ಸಭೆಯಲ್ಲಿ ರಾಜ್ಯಸಭೆ ಚುನಾವಣೆ ವಿಚಾರವನ್ನೂ ಪ್ರಸ್ತಾಪಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ದೇವೇಗೌಡರನ್ನು ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆ ಮಾಡಿದರೆ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಇದರಿಂದ ಹಳೇ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ–ಜೆಡಿಎಸ್‌ಗೆ ಅನುಕೂಲ ಆಗಬಹುದು ಎಂಬ ಅಭಿಪ್ರಾಯ ಬಿಜೆಪಿ ವರಿಷ್ಠರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.