ADVERTISEMENT

ಎರಡೂ ರಾಷ್ಟ್ರೀಯ ಪಕ್ಷಗಳು ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿವೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 6:12 IST
Last Updated 2 ಆಗಸ್ಟ್ 2022, 6:12 IST
   

ಬೆಂಗಳೂರು: ಕಂಗೊಳಿಸುತ್ತಿದ್ದ ಕರಾವಳಿಯಲ್ಲಿ ಬಡ ಕುಟುಂಬಗಳ ಯುವಕರನ್ನು ರಾಜಕೀಯ ದುರ್ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳೂ ಕ್ರಿಯಾಶೀಲ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕರಾವಳಿಯಲ್ಲಿ ನಡೆದ ಮೂವರು ಯುವಕರ ಹತ್ಯೆ, ನಂತರದ ಬೆಳವಣಿಗೆಗಳ ಕುರಿತು ಮಂಗಳವಾರ ಟ್ವೀಟ್‌ ಮಾಡಿರುವ ಅವರು, ಸರ್ಕಾರ ಮತ್ತು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕರಾವಳಿಯಲ್ಲಿ ನಡೆದ ತ್ರಿವಳಿ ಕೊಲೆಗಳ ಗುಟ್ಟನ್ನು ಬೇಧಿಸಿ ನೈಜ ಹಂತಕರನ್ನು ಹಿಡಿಯುವ ಬದಲು ರಾಜ್ಯ ಬಿಜೆಪಿ ಸರಕಾರವು, ತಾನೇ ಮುಂದೆ ನಿಂತು ದಿನಕ್ಕೊಂದು ಕಥೆ ಕಟ್ಟುತ್ತಿದೆ. ಕ್ಷಣಕ್ಕೊಂದು ಟ್ವಿಸ್ಟ್‌ ಕೊಡುತ್ತಾ, ಜನರಿಗೆ ಸತ್ಯ ತಿಳಿಸುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಮಂಗಳೂರಿನಲ್ಲಿ ನಿನ್ನೆ (ಸೋಮವಾರ) ಹೇಳಿದಂತೆ, ಅಗಸ್ಟ್‌ 5ರೊಳಗೆ ನೈಜ ಕೊಲೆಗೆಡುಕರನ್ನು ಬಂಧಿಸದಿದ್ದರೆ ನಾನು ಶಾಂತಿಯುತ ಸತ್ಯಾಗ್ರಹ ಕೂರುವುದು ಶತಃಸಿದ್ಧ. ನನ್ನದು ಗಾಂಧೀ ಮಾರ್ಗ. ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವ ಪಕ್ಷಕ್ಕೆ ನೆತ್ತರ ದಾರಿಯೇ ರಾಜಮಾರ್ಗ ಎನ್ನುವುದನ್ನು ಕರಾವಳಿ ಜನರು ಅರ್ಥ ಮಾಡಿಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯ ಬಿಜೆಪಿ ಸರಕಾರದ ಪಕ್ಷಪಾತ ನೀತಿ ಕಣ್ಣಿಗೆ ರಾಚುವಂತಿದೆ. ಇದು ಅತ್ಯಂತ ಮಾರಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡವಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಈಗೇನೋ ಜ್ಞಾನೋದಯವಾಗಿ ಮಸೂದ್‌ ಮತ್ತು ಫಾಝಿಲ್‌ ಮನೆಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.