ADVERTISEMENT

ಉಕ್ರೇನ್‌ನಿಂದ ಮರಳಿದ ವೈದ್ಯ ವಿದ್ಯಾರ್ಥಿಗಳ ಭವಿಷ್ಯವೇನು?: ಎಚ್.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮಾರ್ಚ್ 2022, 7:38 IST
Last Updated 7 ಮಾರ್ಚ್ 2022, 7:38 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಬೆಂಗಳೂರು: 'ಆಪರೇಷನ್‌ ಗಂಗಾ' ಹೆಸರಿನಲ್ಲಿ ಕೇಂದ್ರ ಸರ್ಕಾರ ಉಕ್ರೇನ್‌ʼನಿಂದ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್‌ ಮಾಡಿದೆ ಎಂಬುದೇನೋ ಸರಿ. ಆದರೆ, ಆ ವೈದ್ಯ ವಿದ್ಯಾರ್ಥಿಗಳ ಭವಿಷ್ಯವೇನು? ಮತ್ತೆ ಆ ದೇಶಕ್ಕೆ ಹೋಗಲು ಸಾಧ್ಯವಿಲ್ಲ. ಅಲ್ಲಿನ ಶಿಕ್ಷಣ ಸಂಸ್ಥೆ, ವಿವಿಗಳನ್ನೂ ರಷ್ಯಾ ಸೇನೆ ಧ್ವಂಸ ಮಾಡಿದೆ ಎಂದು ಮಾಧ್ಯಮಗಳೇ ತೋರಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕರ್ನಾಟಕದ 800 ರಿಂದ 1000 ಮಕ್ಕಳು ಸೇರಿ ಭಾರತದ 20,000ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ. ಇನ್ನೂ ಕೆಲವರು ಬರುವವರಿದ್ದಾರೆ. ಅವರೆಲ್ಲರ ಶೈಕ್ಷಣಿಕ ಭವಿಷ್ಯದ ಪ್ರಶ್ನೆ ಏನು? ಪೋಷಕರು ಸಾಲ ಮಾಡಿ ಮಕ್ಕಳನ್ನು ಉಕ್ರೇನ್‌ಗೆ ಕಳಿಸಿದ್ದರು. ಯುದ್ಧದಿಂದ ಅವರ ಶಿಕ್ಷಣ ಅತಂತ್ರವಾಗಿದೆ ಎಂದಿದ್ದಾರೆ.

ಯುದ್ಧಭೂಮಿಯಿಂದ ಜೀವ ಉಳಿಸಿಕೊಂಡು ಬಂದ ವಿದ್ಯಾರ್ಥಿಗಳ ಭವಿಷ್ಯವನ್ನು ಮತ್ತೆ ಕಟ್ಟಿಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಕರ್ನಾಟಕದಲ್ಲಿ 50-60 ವೈದ್ಯ ಕಾಲೇಜುಗಳಿವೆ. ಅಗತ್ಯಬಿದ್ದರೆ ಒಂದು ಪ್ರವೇಶ ಪರೀಕ್ಷೆ ನಡೆಸಿ ಇಷ್ಟೂ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಿ. ಪ್ರತಿ ಕಾಲೇಜೂ ತಲಾ 10 ಮಕ್ಕಳಿಗಾದರೂ ಉಚಿತ ಶಿಕ್ಷಣ ನೀಡಲಿ' ಎಂದು ಒತ್ತಾಯಿಸಿದ್ದಾರೆ.

ADVERTISEMENT

₹ ‌‌2,65,720 ಕೋಟಿ ಬಜೆಟ್‌ ಗಾತ್ರದ ಕರ್ನಾಟಕಕ್ಕೆ ₹ 50 ರಿಂದ ₹ 100 ಕೋಟಿ ಖರ್ಚು ಮಾಡುವುದು ಕಷ್ಟವೇ? ಈ ಮೊತ್ತದಲ್ಲಿ ಅರ್ಧಪಾಲನ್ನು ಕೇಂದ್ರ ಸರ್ಕಾರವೇ ನೀಡಲಿ. ನೀಟ್‌ ಮೂಲಕ ಶೇ 50 ರಷ್ಟು ಸೀಟುಗಳನ್ನು ಕೇಂದ್ರ ಇಟ್ಟುಕೊಳ್ಳುವುದಿಲ್ಲವೇ? ಎರಡೂ ಸರ್ಕಾರಗಳು ಅಂತಃಕರಣದಿಂದ ಆಲೋಚಿಸಲಿ ಎನ್ನುವುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.

ʼವೈದ್ಯೋ ನಾರಾಯಣೋ ಹರಿಃʼ ಎಂದು ಹೇಳುತ್ತೇವೆ. ಇಷ್ಟು ವಿದ್ಯಾರ್ಥಿಗಳು ವೈದ್ಯರಾದರೆ ಎಷ್ಟು ಜನರ ಜೀವ ಉಳಿಸಬಲ್ಲರು, ರಾಜ್ಯಕ್ಕೆಷ್ಟು ಸೇವೆ ಸಲ್ಲಿಸಬಹುದು. ʼಹಣದ ಮೂಲಕ ಶಿಕ್ಷಣಕ್ಕೆ ಬೆಲೆಕಟ್ಟಿ ಮಕ್ಕಳ ಕನಸುಗಳ ಜತೆ ವ್ಯಾಪಾರೀಕರಣ ಮಾಡುವುದು ಬೇಡ.ʼ ಕೇಂದ್ರ-ರಾಜ್ಯ ಸರ್ಕಾರಗಳು ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.