
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ‘ರಾಜ್ಯದಲ್ಲಿ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ ಕಳವು ಮಾಡಿದ್ದರಿಂದಲೇ 136 ಸ್ಥಾನಗಳಲ್ಲಿ ಗೆದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು ‘ಮತ ಕಳವಿನಿಂದಲೇ ಬಿಜೆಪಿ ಗೆಲ್ಲುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪ ಮಾಡುತ್ತಿದ್ದಾರೆ. ಮತಕಳವು ಮಾಡಿ ಅಧಿಕಾರಕ್ಕೆ ಬಂದವರು ಈಗ ಬೇರೆಯವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.
‘ವಿಧಾನಸಭೆ ಚುನಾವಣೆಯಲ್ಲಿ 136 ಸೀಟು ಬರುತ್ತೆ ಎಂದು ಅಷ್ಟು ನಿಖರವಾಗಿ ಹೇಗೆ ಹೇಳಿದರು? ಆ ಸಂಖ್ಯೆ ಅವರಿಗೆ ಹೇಗೆ ಗೊತ್ತಿತ್ತು? ಯಾವ ಆಧಾರದಲ್ಲಿ ಹೇಳಿದರು? ಇದೆಲ್ಲ ಗಮನಿಸಿದರೆ ಮತ ಕಳವು ಮಾಡಿರುವುದೇ ಕಾಂಗ್ರೆಸ್ ಪಕ್ಷ. ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುತ್ತಿದೆ. ನರೇಂದ್ರ ಮೋದಿ ರಾಜ್ಯದಲ್ಲಿ ಬಿಜೆಪಿಗೆ 67 ಸೀಟು ಗೆಲ್ಲಿಸುವುದಕ್ಕೆ ಮತ ಕಳವು ಮಾಡಿಸಿದ್ದರಾ? ಕಾಂಗ್ರೆಸ್ ಜನರನ್ನು ಯಾಮಾರಿಸಿ, ವ್ಯರ್ಥ ಹೇಳಿಕೆ ಕೊಡುತ್ತಾ ಸಮಯ ವ್ಯರ್ಥ ಮಾಡುತ್ತಿದೆ. ರಾಜ್ಯದಲ್ಲಿ ಹಲವು ಗಂಭೀರ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಅತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.
‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜಂಟಿ ಪತ್ರಿಕಾಗೋಷ್ಠಿ ಎಂಬ ಮಾಹಿತಿ ತಿಳಿದಾಗ ಯಾವುದೋ ಮಹತ್ವದ ವಿಷಯ ಇರಬೇಕು ಎಂದುಕೊಂಡೆ. ಮತ ಕಳವಿನ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವುದು ಅವರ ಸಣ್ಣತನ. ಈ ಸಣ್ಣತನವನ್ನು ರಾಜ್ಯದ ಜನರು ನೋಡಿದ್ದಾರೆ. ಅವರನ್ನು ಶಾಶ್ವತವಾಗಿ ಮನೆಗೆ ಕಳಿಸುವ ದಿನ ದೂರ ಇಲ್ಲ’ ಎಂದರು.
‘ಖಾಲಿ ಆಗಿರುವ ಖಜಾನೆ ತುಂಬಿಸಲು ಒಂದು ದಿನದ ಹಿಂದಷ್ಟೇ ಸಭೆ ಮಾಡಿದ್ದಾರೆ. ಜನರ ಮೇಲೆ ನಿರಂತರ ತೆರಿಗೆ ವಿಧಿಸುವ ಮೂಲಕ ಹಣವನ್ನು ಲೂಟಿ ಮಾಡುತ್ತಿದ್ದಾರೆ. ತಪ್ಪು ತಿದ್ದಿಕೊಂಡು ಕೆಲಸ ಮಾಡುವಂತೆ ಹೇಳುವ ಬುದ್ಧಿಮಾತು ಕೇಳುವುದಿಲ್ಲ. ಬುದ್ಧಿಯೂ ಬಂದಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.