ADVERTISEMENT

ಚಿಲುಮೆ ಕಚೇರಿಯಲ್ಲಿ ಮಂತ್ರಿಯ ಖಾಲಿ ಚೆಕ್‌ ಏಕಿತ್ತು: ಕುಮಾರಸ್ವಾಮಿ ಪ್ರಶ್ನೆ

ಮಂತ್ರಿ ವಜಾ ಮಾಡಿ ತನಿಖೆ ನಡೆಸಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 12:26 IST
Last Updated 19 ನವೆಂಬರ್ 2022, 12:26 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಕೋಲಾರ‌: ‘ಮತ ಪಟ್ಟಿಗೆ ಕನ್ನ ಪ್ರಕರಣದಲ್ಲಿ ಚಿಲುಮೆ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಮಂತ್ರಿಯ ಖಾಲಿ ಚೆಕ್‌, ಲೆಟರ್‌ ಹೆಡ್‌, ದುಡ್ಡು, ಗುರುತಿನ ಚೀಟಿ ಸಿಕ್ಕಿವೆ. ಅವು ಅಲ್ಲಿ ಏಕಿದ್ದವು? ಇಂಥ ಮಂತ್ರಿ ಇಟ್ಟುಕೊಂಡು ಯಾವ ತನಿಖೆ ನಡೆಸುತ್ತಾರೆ. ಮೊದಲ ಆ ಮಂತ್ರಿ ವಜಾಗೊಳಿಸಿ ತನಿಖೆ ನಡೆಸಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಶನಿವಾರ ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿ ಕುತಂತ್ರದ ರಾಜಕಾರಣ ನಡೆಸುತ್ತಿದೆ. ಇದು ಅತ್ಯಂತ ಹೇಯ ಕೃತ್ಯ. ಒಂದು ಕಡೆ ದೇಶ, ಸಮಾಜ ಒಡೆಯುತ್ತಿದ್ದರೆ, ಇನ್ನೊಂದೆಡೆ ಕುತಂತ್ರದಿಂದ ಚುನಾವಣೆ ಗೆಲ್ಲಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸಿ ಮುಚ್ಚಿ ಹಾಕುತ್ತಾರೆ ಅಷ್ಟೆ’ ಎಂದು ದೂರಿದರು.

‘ಜೆಡಿಎಸ್‌, ಕಾಂಗ್ರೆಸ್‌ ಹೆಚ್ಚಿನ ಶಕ್ತಿ ಹೊಂದಿರುವ ಬೂತ್‌ಗಳಲ್ಲಿ 40 ಸಾವಿರದವರೆಗೆ ಪಟ್ಟಿಯಿಂದ ಮತದಾರರನ್ನು ಕೈಬಿಡಲಾಗಿದೆ. ಈ ಕೃತ್ಯವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬರೀ ತಾಕತ್ತು, ಧಮ್ಮಿನ ಬಗ್ಗೆ ಮುಖ್ಯಮಂತ್ರಿ ಮಾತನಾಡುತ್ತಿದ್ದಾರೆ. ಮೊದಲು ನಿಮ್ಮ ಧಮ್ಮು, ತಾಕತ್ತನ್ನು ಹಗರಣ ನಿಲ್ಲಿಸಲು ಬಳಕೆ ಮಾಡಿ. ಆಮೇಲೆ ಬೇರೆಯವರಿಗೆ ಸವಾಲು ಎಸೆಯಿರಿ’ ಎಂದು ತಿರುಗೇಟು ನೀಡಿದರು.

‘ಮತ ಪಟ್ಟಿಗೆ ಕನ್ನ ಪ್ರಕರಣದಲ್ಲಿ ಎಲ್ಲಾ ರೀತಿಯ ಹುನ್ನಾರಗಳಿವೆ. ಬಿಬಿಎಂಪಿ ಚುನಾವಣೆ ನಡೆಸುತ್ತಾರೆ ಎಂಬ ನಂಬಿಕೆಯೇ ನನಗಿಲ್ಲ. ವಿಧಾನಸಭೆ ಚುನಾವಣೆ ನಡೆಸುವವರೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯೂ ನಡೆಯಲ್ಲ’ ಎಂದರು.

ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಾರದಂತೆ ತಡೆಯಲು ಜೆಡಿಎಸ್‌ ರಥಯಾತ್ರೆ ನಡೆಸಲಾಗುತ್ತಿದೆ ಎಂಬ ರಮೇಶ್‌ ಜಾರಕಿಹೊಳಿ ಹೇಳಿಕೆಗೆ, ‘ನಾವೂ ಅಧಿಕಾರಕ್ಕೆ ಬಾರದೆ, ಕಾಂಗ್ರೆಸ್‌ ಕೂಡ ಅಧಿಕಾರಕ್ಕೆ ಬಾರದೆ ಮತ್ಯಾರೂ ಅಧಿಕಾರಕ್ಕೆ ಬರಬೇಕು. ಇನ್ನೊಂದು ವಿಡಿಯೊ ಮಾಡಲು ರಮೇಶ್‌ ಜಾರಕಿಹೊಳಿ ಅವರಿಗೆ ಅಧಿಕಾರಕ್ಕೆ ಬರಬೇಕೇ’ ಎಂದು ಪ್ರಶ್ನಿಸಿದರು.

‘ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಬವಣೆ ನೀಗಿಸಲು ರಥಯಾತ್ರೆ ನಡೆಸುತ್ತಿದ್ದೇನೆ. ಯಾವನೋ ಕಳ್ಳಕಾಕರಿಗೆ ಸಹಾಯ ಮಾಡಲು ಅಲ್ಲ’ ಎಂದು ತಿರುಗೇಟು ನೀಡಿದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.