ರಾಮನಗರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಬಿಡದಿ ಸಮಗ್ರ ಉಪನಗರ ಯೋಜನಾ ಪ್ರದೇಶದ ಹೊಸೂರಿನಲ್ಲಿ ಹೊಂದಿರುವ ಜಮೀನು ದಾಖಲೆಗಳನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಅಧ್ಯಕ್ಷ ಗಾಣಕಲ್ ನಟರಾಜ್ ಸೋಮವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
‘ನನ್ನ ತಾಯಿ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವುದನ್ನು ಡಿ.ಕೆ.ಶಿವಕುಮಾರ್ ಸಾಬೀತು ಪಡಿಸಿದರೆ ತಾಯಿ ಹೆಸರಿನಲ್ಲಿರುವ ಎಲ್ಲ ಜಮೀನನ್ನು ಬಡವರಿಗೆ ದಾನ ಮಾಡುತ್ತೇನೆ’ ಎಂದು ನಿಖಿಲ್ ಕುಮಾರಸ್ವಾಮಿ ಭಾನುವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಸವಾಲು ಹಾಕಿದ್ದರು.
ಈ ಸವಾಲಿಗೆ ಉತ್ತರವಾಗಿ ಇಬ್ಬರ ಜಮೀನು ದಾಖಲೆಗಳನ್ನು ಪ್ರದರ್ಶಿಸಿದ ನಟರಾಜ್, ‘ಯೋಜನೆಯ ಪ್ರಾಥಮಿಕ ಅಧಿಸೂಚನೆ ವಿಶೇಷ ರಾಜ್ಯಪತ್ರ ಮಾರ್ಚ್ 14ರಂದು ಪ್ರಕಟವಾಗಿತ್ತು. 26ರಂದು ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು. ಇದಾದ ಮೂರೇ ದಿನಕ್ಕೆ ಮಾರ್ಚ್ 29ರಂದು ಇಬ್ಬರೂ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದಾರೆ’ ಎಂದು ಹೇಳಿದರು.
‘ಹೊಸೂರಿನ ಸರ್ವೆ ನಂ. 26ರಲ್ಲಿ ನಾಲ್ಕು ಎಕರೆ ಜಮೀನು ನನಗೆ ಲಕ್ಷ್ಮೀದೇವಮ್ಮ ಅವರಿಂದ ಹಿಂಪಡೆಯಲಾಗದ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಮತ್ತು ಕ್ರಯದ ಕರಾರುಪತ್ರ ಮಾಡಿಕೊಂಡಿರುವುದಾಗಿ ನಿಖಿಲ್ ಪತ್ರದಲ್ಲಿ ತಿಳಿಸಿದ್ದಾರೆ. ಹೊಸೂರು ಮತ್ತು ಬನ್ನಿಗಿರಿ ಗ್ರಾಮದ ಒಂಬತ್ತು ಸರ್ವೆ ನಂಬರ್‌ಗಳಲ್ಲಿ ಒಟ್ಟು 29 ಎಕರೆ 10 ಗುಂಟೆ ಜಮೀನು ನನ್ನ ಹೆಸರಿನಲ್ಲಿ ಖಾತೆ ಮತ್ತು ಪಹಣಿಗಳು ದಾಖಲಾಗಿವೆ ಎಂದು ಅನಿತಾ ಹೇಳಿದ್ದಾರೆ. ಕಾರಣಾಂತರಗಳಿಂದ ವಿನಯ್ ಗೌಡ ಎಂ.ಜಿ ಎಂಬವರಿಗೆ ನಾನು ಸ್ಪೆಷಲ್ ಪವರ್ ಆಫ್ ಅಟಾರ್ನಿ (ಎಸ್‌ಪಿಎ) ನೀಡಿದ್ದು, ಇದೀಗ ಜಮೀನನ್ನು ಸ್ವಾಧೀನಾನುಭವಕ್ಕೆ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ’ ಎಂದು ಪತ್ರ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.