ADVERTISEMENT

ಎಚ್‌.ಡಿ.ದೇವೇಗೌಡರಿಂದ ನ್ಯಾಯಾಂಗ ನಿಂದನೆ: ಅಬ್ರಹಾಂ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 15:45 IST
Last Updated 1 ಜುಲೈ 2020, 15:45 IST
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ   

ಮಂಡ್ಯ: ‘ಕಾರ್ಯಕರ್ತನೊಬ್ಬನ ರಕ್ಷಣೆಯ ಭರದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಹೈಕೋರ್ಟ್‌ ನೀಡಿರುವ ಆದೇಶವನ್ನೇ ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ. ಆ ಮೂಲಕ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆ’ ಎಂದು ವಕೀಲ ಟಿ.ಜೆ.ಅಬ್ರಹಾಂ ಬುಧವಾರ ಆರೋಪಿಸಿದರು.

‘ಕೆ.ಆರ್.ಪೇಟೆ ತಾಲ್ಲೂಕಿನ ವಿವಿಧೆಡೆ ಜೆಡಿಎಸ್‌ ಮುಖಂಡ ಎಚ್.ಟಿ.ಮಂಜು ಕಲ್ಲುಪುಡಿ ಘಟಕ ನಡೆಸುತ್ತಿದ್ದಾರೆ. ಅವರು ಕಲ್ಲುಗಣಿ ಚಟುವಟಿಕೆ ನಡೆಸದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಕಿರುಕುಳ ನೀಡುತ್ತಿದ್ದಾರೆ, ಅದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಪತ್ರದಲ್ಲಿ ಉಲ್ಲೇಖಿಸಿರುವ ಹೈಕೋರ್ಟ್‌ ಆದೇಶವನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೈಕೋರ್ಟ್‌ ಕ್ರಷರ್‌ ನಡೆಸದಂತೆ ಆದೇಶ ನೀಡಿದೆ. ಆದರೆ ಹೈಕೋರ್ಟ್ ಉದ್ದಿಮೆ ನಡೆಸಲು ಅನುಮತಿ ನೀಡಿದೆ ಎಂದು ತಪ್ಪಾಗಿ ಉಲ್ಲೇಖ ಮಾಡಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಜೊತೆಗೆ ಇದು ಕ್ರಿಮಿನಲ್‌ ಅಪರಾಧವೂ ಆಗಿದ್ದು ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಎಚ್‌.ಟಿ.ಮಂಜು ಕಾನೂನು ಬಾಹಿರವಾಗಿ ಗಣಿ ಚಟುವಟಿಕೆ ನಡೆಸುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ₹ 10 ಕೋಟಿ ದಂಡ ವಿಧಿಸಿದೆ. ಮಂಡ್ಯದ ಹಿರಿಯ ಭೂ ವಿಜ್ಞಾನಿಗಳು ಕಳೆದ ಫೆ.28ರಂದು ಪಾಂಡವಪುರ ಉಪವಿಭಾಗಾಧಿಕಾರಿಗೆ ಪತ್ರ ಬರೆದು ಅಕ್ರಮದ ವರದಿ ನೀಡಿದ್ದಾರೆ. ಕಾನೂನು ಬಾಹಿರವಾಗಿ 2,15,402 ಮೆಟ್ರಿಕ್‌ ಟನ್‌ ಕಲ್ಲು ಹೊರ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಮಾಜಿ ಪ್ರಧಾನಿ ಕಾನೂನು ಬಾಹಿರ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.