ADVERTISEMENT

ಬೆಂಗಳೂರು 15 ವರ್ಷಗಳಲ್ಲಿ ಬಿಡುಗಡೆಯಾದ ಅನುದಾನದ ಬಳಕೆ ಬಗ್ಗೆ ತನಿಖೆಗೆ ಆಗ್ರಹ

ಬಿಬಿಎಂಪಿ: ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಎಚ್‌ಡಿಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 16:30 IST
Last Updated 20 ಮೇ 2022, 16:30 IST
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶುಕ್ರವಾರ ಭೇಟಿನೀಡಿ, ಜನರ ಅಹವಾಲು ಆಲಿಸಿದರು. ಜೆಡಿಎಸ್‌ ಮುಖಂಡ ಟಿ.ಎ. ಶರವಣ, ಶಾಸಕ ಆರ್‌. ಮಂಜುನಾಥ್‌ ಜತೆಗಿದ್ದರು – ಪ್ರಜಾವಾಣಿ ಚಿತ್ರ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶುಕ್ರವಾರ ಭೇಟಿನೀಡಿ, ಜನರ ಅಹವಾಲು ಆಲಿಸಿದರು. ಜೆಡಿಎಸ್‌ ಮುಖಂಡ ಟಿ.ಎ. ಶರವಣ, ಶಾಸಕ ಆರ್‌. ಮಂಜುನಾಥ್‌ ಜತೆಗಿದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿಗಾಗಿ 15 ವರ್ಷಗಳ ಅವಧಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಬಳಕೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ‘ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವೆಲ್ಲ ಕೆಲಸಗಳನ್ನು ಮಾಡಲಾಗಿದೆ. ಸಚಿವರಾದ ಬೈರತಿ ಬಸವರಾಜ, ಮುನಿರತ್ನ, ಕೆ. ಗೋಪಾಲಯ್ಯ, ಎಸ್‌.ಟಿ. ಸೋಮಶೇಖರ್‌ ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಏನೆಲ್ಲಾ ಕೆಲಸ ಆಗಿವೆ ಎಂಬುದನ್ನು ತಿಳಿಯುವ ಹಕ್ಕು ಜನರಿಗೆ ಇದೆ’ ಎಂದರು.

‘ಈಗಿನ ಸಚಿವರು ತಮ್ಮ ಕ್ಷೇತ್ರಗಳಲ್ಲಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸ್ಪಂದಿಸುವ ಕೆಲಸ ಮಾಡಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ವ್ಯಾಪ್ತಿಯ ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಮಾತ್ರ ಹೋಗುವುದಲ್ಲ; ಇತರ ಕ್ಷೇತ್ರಗಳ ಪರಿಸ್ಥಿತಿಯನ್ನೂ ಅರಿಯಬೇಕು. ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಹೋಗಲಾಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ದಾಸರಹಳ್ಳಿ ಕ್ಷೇತ್ರಕ್ಕೆ ₹ 36 ಕೋಟಿ ಅನುದಾನ ನೀಡಿದ್ದರೆ, ಕೆ.ಆರ್‌. ಪುರ ಕ್ಷೇತ್ರಕ್ಕೆ ₹ 1000 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ರಾಜಕಾಲುವೆಗಳ ಸುಧಾರಣೆಗೆ ₹ 1,600 ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆ ಹಣ ಎಲ್ಲಿಗೆ ಹೋಗಿದೆ? ಕಾಮಗಾರಿ ವಿಳಂಬವಾಗಲು ಕಾರಣವೇನು’ ಎಂದು ಪ್ರಶ್ನಿಸಿದರು.

ಶೇ 75ರಷ್ಟು ಪರಿಹಾರಕ್ಕೆ ಆಗ್ರಹ: ನಗರದಲ್ಲಿ ಮಳೆಯಿಂದ ಆಗಿರುವ ನಷ್ಟಕ್ಕೆ ಶೇಕಡ 75ರಷ್ಟು ಪರಿಹಾರ ನೀಡಬೇಕು. ಪರಿಹಾರದ ಹಣದಲ್ಲೂ ಭ್ರಷ್ಟಾಚಾರ ನಡೆಸಲು ಅವಕಾಶ ನೀಡಬಾರದು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್‌. ಮಂಜುನಾಥ್‌ ಮತ್ತು ಜೆಡಿಎಸ್‌ ಮುಖಂಡ ಟಿ.ಎ. ಶರವಣ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.