ADVERTISEMENT

ಯುವಜನರಿಗೂ ಹೃದ್ರೋಗ: ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ

ಜಯದೇವ ಸಂಸ್ಥೆಗೆ ಭೇಟಿ ನೀಡುವ ಹೃದ್ರೋಗಿಗಳಲ್ಲಿ ಶೇ 20ರಷ್ಟು ಮಂದಿ 40 ವರ್ಷದೊಳಗಿನವರು

ವರುಣ ಹೆಗಡೆ
Published 15 ಮಾರ್ಚ್ 2025, 23:30 IST
Last Updated 15 ಮಾರ್ಚ್ 2025, 23:30 IST
   

ಬೆಂಗಳೂರು: ವಾಹನ ಚಲಾಯಿಸುತ್ತಿರುವಾಗ, ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುವಾಗ, ಉದ್ಯಾನದಲ್ಲಿ ನಡೆದಾಡುವಾಗ, ಬೆಟ್ಟ ಏರುತ್ತಿರುವಾಗ ಸೇರಿ ವಿವಿಧ ಸಂದರ್ಭದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ, ಮೃತಪಡುವ ಯುವಕರ ಸಂಖ್ಯೆ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಳವಾಗುತ್ತಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡುವ ಹೊರ ಹಾಗೂ ಒಳರೋಗಿಗಳ ಸಂಖ್ಯೆಯೂ ಏರುಗತಿ ಪಡೆದಿದೆ. 

ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿರುವಾಗಲೇ 38 ವರ್ಷದ ಚಾಲಕ ಹೃದಯಾಘಾತದಿಂದ ಮೃತ ಪಟ್ಟಿರುವುದು ನೆಲಮಂಗಲ ತಾಲ್ಲೂಕಿನ ಬಿನ್ನಮಂಗಲ ಬಸ್ ನಿಲ್ದಾಣದ ಬಳಿ ಕಳೆದ ನವೆಂಬರ್‌ನಲ್ಲಿ ನಡೆದಿತ್ತು. ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿ ಜನವರಿಯಲ್ಲಿ ಹೃದಯಾಘಾತದಿಂದ ಸಾವೀಗಿಡಾದ ಘಟನೆ ಕಲಬುರಗಿಯಲ್ಲಿ ಸಂಭವಿಸಿತ್ತು. ಅಂಜನಾದ್ರಿ ಬೆಟ್ಟ ಹತ್ತುವಾಗ 18 ವರ್ಷದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಗಂಗಾವತಿಯಲ್ಲಿ ಜನವರಿ ತಿಂಗಳಲ್ಲೇ ವರದಿಯಾಗಿತ್ತು. ರಸ್ತೆ ಬದಿ ಪಾರ್ಕ್‌ ಮಾಡಿದ್ದ ಕಾರಿನಲ್ಲಿಯೇ ಯುವಕನೊಬ್ಬ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಬೆಂಗಳೂರಿನ ಬ್ರೂಕ್‌ಫೀಲ್ಡ್ ರಸ್ತೆಯಲ್ಲಿ ಫೆಬ್ರುವರಿಯಲ್ಲಿ ನಡೆದಿತ್ತು. ಇದೇ ರೀತಿ ರಾಜ್ಯದ ವಿವಿಧೆಡೆ ಇತ್ತೀಚಿನ ತಿಂಗಳುಗಳಲ್ಲಿ ಆರೋಗ್ಯವಂತರಿಗೂ ಕಿರಿಯ ವಯಸ್ಸಿನಲ್ಲಿಯೇ ಹೃದಯಾಘಾತ ಸಂಭವಿಸುತ್ತಿದೆ.

ದೈಹಿಕವಾಗಿ ಸದೃಢರಾಗಿರುವವರೂ ತೀವ್ರ ಹೃದಯಾಘಾತ, ಹೃದಯ ಸ್ತಂಭನದಿಂದ ಮೃತಪಡುತ್ತಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಗಳ ಕಾರಣ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 96 ಸಾವಿರ ಮಂದಿ ಹೃದಯಾಘಾತದಿಂದ ಮೃತಪಡುತ್ತಾರೆ. ಹೃದಯದ ಆರೈಕೆಗೆ ಮೀಸಲಾಗಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಭೇಟಿ ನೀಡುವ ಹೊರ ರೋಗಿಗಳ ವಾರ್ಷಿಕ ಸಂಖ್ಯೆ 8 ಲಕ್ಷದ ಗಡಿ ದಾಟಿದೆ. ವರ್ಷದಿಂದ ವರ್ಷಕ್ಕೆ ಹೊರ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸಂಸ್ಥೆಯ ನೋಂದಣಿ ಪ್ರಕಾರ ಐದು ವರ್ಷಗಳಲ್ಲಿ 28.10 ಲಕ್ಷ ಹೊರರೋಗಿಗಳು ಭೇಟಿ ನೀಡಿದ್ದಾರೆ. 

ADVERTISEMENT

ಒಳ ರೋಗಿಗಳು ಹೆಚ್ಚಳ: 20ರಿಂದ 40 ವರ್ಷದೊಳಗಿನವರೂ ಹೃದಯಾಘಾತಕ್ಕೆ ಒಳಪಡುತ್ತಿರುವುದರಿಂದ ಸಂಸ್ಥೆಗೆ ಭೇಟಿ ನೀಡುವ ಒಳ ರೋಗಿಗಳ ಸಂಖ್ಯೆಯೂ ಏರಿಕೆ ಕಂಡಿದೆ. 2024ರಲ್ಲಿ 76 ಸಾವಿರಕ್ಕೂ ಅಧಿಕ ಒಳ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. ಸಂಸ್ಥೆಯ ಇತಿಹಾಸದಲ್ಲಿ ಒಂದು ವರ್ಷದಲ್ಲಿ ದಾಖಲಾದ ಗರಿಷ್ಠ ಒಳರೋಗಿಗಳ ಸಂಖ್ಯೆ ಇದಾಗಿದೆ. ಐದು ವರ್ಷಗಳಲ್ಲಿ 2.29 ಲಕ್ಷಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದಾರೆ. 2020 ಮತ್ತು 2021ರಲ್ಲಿ ಕೋವಿಡ್ ಹಾಗೂ ಕೆಲ ನಿರ್ಬಂಧಗಳ ಕಾರಣ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಕಡಿಮೆಯಿತ್ತು. ಬಳಿಕ ಹೃದಯಾಘಾತ ಪ್ರಕರಣಗಳು ದಿಢೀರ್ ಏರಿಕೆ ಕಂಡಿವೆ. ಸಂಸ್ಥೆಗೆ ಭೇಟಿ ನೀಡುವವರಲ್ಲಿ ಶೇ 20ರಷ್ಟು ಮಂದಿ 40 ವರ್ಷದೊಳಗಿನವರಾಗಿದ್ದಾರೆ.

ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌ಗಳಲ್ಲಿ (ಎನ್‌ಸಿಡಿ) ಹೃದ್ರೋಗ ಪತ್ತೆಗೆ ತಪಾಸಣೆ ನಡೆಸುತ್ತಿದೆ. ತೀವ್ರ ಹೃದಯಾಘಾತಕ್ಕೆ ಒಳಗಾದವರಿಗೆ ‘ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ’ಯಡಿ ‘ಟೆನೆಕ್ಟ್ ಪ್ಲಸ್’ ಚುಚ್ಚುಮದ್ದನ್ನು ಉಚಿತವಾಗಿ ಒದಗಿಸುತ್ತಿದೆ. ಪುನೀತ್‌ ರಾಜ್‌ಕುಮಾರ್ ಅವರ ಸ್ಮರಣಾರ್ಥ 2023ರಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದೆ. 

ಲಸಿಕೆ ಅಡ್ಡಪರಿಣಾಮ?

‘ಕೋವಿಡ್ ನಿಯಂತ್ರಣಕ್ಕೆ ಬಂದು ವರ್ಷಗಳೇ ಕಳೆದಿವೆ. ಅದರ ಪರಿಣಾಮ ಇಷ್ಟು ದಿನ ಇರುವುದಿಲ್ಲ. ಕೋವಿಡ್ ಹಾಗೂ ಲಸಿಕೆಯ ಪರಿಣಾಮದಿಂದ ಹೃದಯಾಘಾತ ಸಂಭವಿಸುತ್ತಿದೆ ಎನ್ನುವುದು ಅವೈಜ್ಞಾನಿಕ. ಇದಕ್ಕೆ ವೈದ್ಯಕೀಯ ಪುರಾವೆಗಳೂ ಇಲ್ಲ’ ಎಂದು ಜಯದೇವ ಹೃದ್ರೋಗ ಸಂಸ್ಥೆ ವೈದ್ಯರು ತಿಳಿಸಿದರು.

ಹೃದಯಾಘಾತಕ್ಕೆ ಪ್ರಮುಖ ಕಾರಣಗಳು

* ಅಧಿಕ ರಕ್ತದೊತ್ತಡ ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್‌

*ಬದಲಾದ ಜೀವನಶೈಲಿ ಧೂಮಪಾನ ತಂಬಾಕು ಉತ್ಪನ್ನ ಸೇವನೆ ಮಾದಕ ವಸ್ತುಗಳ ಸೇವನೆಯ ವ್ಯಸನ  

*ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆ ಇಲ್ಲದಿರುವುದು 

*ಜಂಕ್ ಫುಡ್‌ ಸೇರಿ ಪಾಶ್ಚಾತ್ಯ ಆಹಾರ ಸೇವನೆ 

*ಜಿಮ್‌ಗಳಲ್ಲಿ ಅಶಿಸ್ತಿನ ಕಸರತ್ತು ಅವೈಜ್ಞಾನಿಕವಾಗಿ ಪ್ರೊಟೀನ್‌ ಸಪ್ಲಿಮೆಂಟ್ ಪಡೆಯುವಿಕೆ

*ಆನುವಂಶಿಕವಾಗಿ ಕುಟುಂಬದ ಸದಸ್ಯರಿಗೆ ಹೃದಯಾಘಾತದ ಇತಿಹಾಸವಿದ್ದರೆ 

* ಮಾನಸಿಕ ಒತ್ತಡ ಹೆಚ್ಚುತ್ತಿರುವ ವಾಯುಮಾಲಿನ್ಯ

ಆಧುನಿಕ ಜೀವನಶೈಲಿಯಿಂದ ಯುವಜನರಲ್ಲಿಯೂ ಹೃದಯಾಘಾತ ಕಾಣಿಸಿಕೊಳ್ಳುತ್ತಿದೆ. ಧೂಮಪಾನದಂತಹ ವ್ಯಸನ ಸೇರಿ ನಾನಾ ಕಾರಣಗಳಿಂದ ಹೃದಯಾಘಾತ ಪ್ರಕರಣ ಹೆಚ್ಚಿದೆ
–ಡಾ.ಕೆ.ಎಸ್. ರವೀಂದ್ರನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.