ADVERTISEMENT

ಪುತ್ತೂರು | ಅಶೋಕ ಜನಮನ ಕಾರ್ಯಕ್ರಮದಲ್ಲಿ ನೂಕುನುಗ್ಗಲು: ಹಲವರು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 12:16 IST
Last Updated 20 ಅಕ್ಟೋಬರ್ 2025, 12:16 IST
   

ಪುತ್ತೂರು: ನಗರದಲ್ಲಿ ಸೋಮವಾರ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಉಡುಗೊರೆ ಪಡೆಯುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ ಉಸಿರು ಕಟ್ಟಿ ಪ್ರಜ್ಞೆ ಕಳೆದುಕೊಂಡ 13 ಮಂದಿಯನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶಾಲವಾದ ಕೊಂಬೆಟ್ಟು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.‌ ಮುಖ್ಯಮಂತ್ರಿ ಪಾಲ್ಗೊಂಡ ಕಾರ್ಯಕ್ರಮ ಆಗಿರುವುದರಿಂದ ನೀರಿನ ಬಾಟಲಿ ತೆಗೆದುಕೊಂಡು ಹೋಗಲು ಪೊಲೀಸರು ಅನುವು ಮಾಡಲಿಲ್ಲ.

12 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಂದಾಗ 1 ಗಂಟೆ ಆಗಿತ್ತು. ಜನರು ಬೆಳಿಗ್ಗೆಯಿಂದಲೇ ಬಂದು ಕಾಯುತ್ತಿದ್ದರು. ಒಂದು ಲಕ್ಷ ಜನರಿಗೆ ಉಡುಗೊರೆ ಹಂಚಲಾಗುವುದು ಎಂದು ಸಂಘಟಕರು ಘೋಷಿಸಿದ್ದರು. ಕಾರ್ಯಕ್ರಮ ಮುಕ್ತಾಯಗೊಂಡಾಗ 3 ಗಂಟೆಯಾಗಿತ್ತು. ನೀರು ಆಹಾರವಿಲ್ಲದೆ ಸುಸ್ತಾಗಿದ್ದ ಜನರು ಉಡುಗೊರೆಗಾಗಿ ಹೋದಾಗ ನೂಕುನುಗ್ಗಲು ಉಂಟಾಯಿತು.‌ ತಲೆ ಸುತ್ತು ಬಂದು ಬಿದ್ದವರನ್ನು ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಯಿತು.

ADVERTISEMENT

ಅನೇಕ ಮಕ್ಕಳು ದಾರಿಯಲ್ಲೂ ಪ್ರಜ್ಞೆ ತಪ್ಪಿ ಬಿದ್ದರು. ಅವರಿಗೆ ಅಂಗಡಿಯಿಂದ ನೀರಿನ ಬಾಟಲಿ ಖರೀದಿಸಿ ಕುಡಿಯಲು ಕೊಟ್ಟು ಮತ್ತು ಮುಖಕ್ಕೆ ಚಿಮುಕಿಸಿ ಪೋಷಕರು ಸಂತೈಸಿದರು.

ಆಹಾರ ಮತ್ತು ಗಿಫ್ಟ್ ವಿಳಂಬವಾಗಿ ನೀಡಿದ ಕಾರಣ ಹೈಪೊಗ್ಲೇಸಮೀಯ ಅಥವಾ ಡಿಹೈಡ್ರೇಷನ್ ಉಂಟಾಗಿದೆ, 3 ಮಹಿಳೆಯರಿಗೆ ಐ.ವಿ. ಫ್ಲೂಯಿಡ್ಸ್ ನೀಡಲಾಗಿದ್ದು 7 ಮಹಿಳೆಯರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಬೌನ್ಸರ್‌ಗಳ ನಿಯೋಜನೆ
ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಭಾರಿ ಬಂದೋಬಸ್ತ್‌ ಇದ್ದರೂ ವೇದಿಕೆ ಎದುರಿನ ಒಂದಷ್ಟು ಭಾಗದ ನಿಯಂತ್ರಣವನ್ನು ಬೌನ್ಸರ್‌ಗಳಿಗೆ ವಹಿಸಲಾಗಿತ್ತು. ಏಜೆನ್ಸಿಯೊಂದರಿಂದ ಬಂದಿದ್ದ ಬೌನ್ಸರ್‌ಗಳು, ತಮಗೆ ಮೀಸಲಿರಿಸಿದ್ದ ಜಾಗದ ಕಡೆಗೆ ಪ್ರಮುಖರು ಹೋಗುವಾಗ ಮನಬಂದಂತೆ ತಳ್ಳಿದರು. ಮಹಿಳೆಯರು, ಹಲವು ಪತ್ರಕರ್ತರನ್ನೂ ತಡೆದರು. ತಮಗೆ ಮೀಸಲಿರಿಸಿರುವ ಜಾಗಕ್ಕೆ ಹೋಗುವುದಾಗಿ ಹೇಳಿದರೂ ತಳ್ಳಿದರು. ನಂತರ ಸಂಘಟಕರು ಬಂದು ಕರೆದುಕೊಂಡು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.