ADVERTISEMENT

ರಾಜ್ಯದಲ್ಲಿ ಮುಂಗಾರು ಅಬ್ಬರ

ಜಲಾನಯನ ಪ್ರದೇಶದಲ್ಲಿ ಮಳೆ: ಹಾರಂಗಿ ಜಲಾಶಯದ ಒಳಹರಿವು ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 21:06 IST
Last Updated 3 ಆಗಸ್ಟ್ 2020, 21:06 IST
ಮಡಿಕೇರಿಯಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆಯ ನಡುವೆ ಜನರು ಕೊಡೆಯ ರಕ್ಷಣೆ ಪಡೆದು ಸಾಗಿದರು
ಮಡಿಕೇರಿಯಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆಯ ನಡುವೆ ಜನರು ಕೊಡೆಯ ರಕ್ಷಣೆ ಪಡೆದು ಸಾಗಿದರು   
""

ಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಮುಂದುವರಿದಿದ್ದು, ನದಿ ಹಳ್ಳ–ಕೊಳ್ಳಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಸೋಮವಾರ ದಿನವಿಡೀ ಧಾರಾಕಾರ ಮಳೆಯಾಗಿದೆ. ಹಾರಂಗಿ ಜಲಾಶಯದ ಒಳಹರಿವು ಏರಿಕೆಯಾಗುತ್ತಿದ್ದು, ಹೊರ ಹರಿವು ಸಹ ಹೆಚ್ಚಿಸಲಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಹಾಸನ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಆಗಾಗ ಬಿಡುವು ನೀಡಿ ಅಬ್ಬರಿಸುತ್ತಿದೆ. ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ಕುಮಾರಧಾರಾ ನದಿಯ ನೀರಿನ ಪ್ರಮಾಣ ಏರಿಕೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ. ನೇತ್ರಾವತಿ, ಫಲ್ಗುಣಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.

ADVERTISEMENT

ಉಡುಪಿ ಜಿಲ್ಲೆಯಲ್ಲೂ ಮಳೆ ಬಿರುಸುಗೊಂಡಿದ್ದು, ಕುಂದಾಪುರ, ಕಾರ್ಕಳ, ಬೈಂದೂರು, ಉಡುಪಿ, ಹೆಬ್ರಿ, ಕಾಪು, ಬ್ರಹ್ಮಾವರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ.

ಧಾರಾಕಾರ ಮಳೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಚುರುಕಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಸ್ವಲ್ಪ ಜಾಸ್ತಿಯಾಗಿದೆ. ಎನ್‌.ಆರ್‌.ಪುರ, ಮೂಡಿಗೆರೆ ಸುತ್ತಮುತ್ತ ಧಾರಾಕಾರವಾಗಿ ಸುರಿದಿದೆ. ಕೊಟ್ಟಿಗೆಹಾರದಲ್ಲಿ 5.4 ಸೆಂ.ಮೀ ಮಳೆಯಾಗಿದೆ. ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಮಲಯ ಮಾರುತ ಬಳಿ ಗುಡ್ಡದ ಮಣ್ಣು ರಸ್ತೆ ಬದಿಗೆ ಕುಸಿದಿದೆ. ತರೀಕೆರೆ, ಚಿಕ್ಕಮಗಳೂರು ಗಿರಿಶ್ರೇಣಿ, ಶೃಂಗೇರಿ, ಕೊಪ್ಪ, ಕಳಸ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಬಿರುಸಿನ ಮಳೆ: ಉತ್ತರ ಕನ್ನಡ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಮಳೆ ಬಿರುಸುಗೊಂಡಿದೆ. ಸಿದ್ದಾಪುರ, ಯಲ್ಲಾಪುರ, ಹಳಿಯಾಳ ತಾಲ್ಲೂಕುಗಳಲ್ಲಿ ದಿನವಿಡೀ ರಭಸದ ಮಳೆಯಾಗಿದೆ. ಶಿರಸಿ ಹಾಗೂ ಮುಂಡಗೋಡ ತಾಲ್ಲೂಕುಗಳಲ್ಲಿ ಮಳೆಯೊಂದಿಗೆ ಗಾಳಿಯ ಅಬ್ಬರವೂ ಜೋರಾಗಿತ್ತು. ಅಂಕೋಲಾ, ಹೊನ್ನಾವರ, ಕುಮಟಾದಲ್ಲಿ ಸಾಧಾರಣ ಮಳೆಯಾಗಿದೆ.

ಧಾರವಾಡ, ಬೆಳಗಾವಿ, ಗದಗ, ಹಾವೇರಿ, ವಿಜಯಪುರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಿದೆ.

ವಿದ್ಯುತ್ ಉತ್ಪಾದನೆ ಆರಂಭ: ಮುಂಗಾರು ಹಂಗಾಮಿನ ಕಾಲುವೆಗೆ ನೀರು ಹರಿಸುವ ಉದ್ದೇಶದಿಂದ ನಾರಾಯಣಪುರ ಜಲಾಶಯಕ್ಕೆ 5,000 ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಆಲಮಟ್ಟಿ ಜಲವಿದ್ಯುದಾಗಾರದಲ್ಲಿ ಭಾನುವಾರ ಸಂಜೆಯಿಂದ 37 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ.

7 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’

ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇದೇ 4ರಿಂದ 7ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ವ್ಯಾಪಕ ಮಳೆಯಾಗುವ ನಿರೀಕ್ಷೆ ಇರುವುದರಿಂದ ನಾಲ್ಕೂ ದಿನ ‘ಆರೆಂಜ್ ಅಲರ್ಟ್‌ ’ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.