ADVERTISEMENT

ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆ, 2 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಬಾಗಲಕೋಟೆ: ಹಳ್ಳದಲ್ಲಿ ಬಿದ್ದು ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 19:57 IST
Last Updated 26 ಸೆಪ್ಟೆಂಬರ್ 2020, 19:57 IST
ಕಲಬುರ್ಗಿಯ ಪೂಜಾ ಕಾಲೊನಿಯಲ್ಲಿ ಹರಿಯುತ್ತಿದ್ದ ಮಳೆ ನೀರನ್ನು ದಾಟಲು ಅಳವಡಿಸಿದ್ದ ಏಣಿ ಮೇಲೆ ಮಹಿಳೆಯೊಬ್ಬರು ಮಗುವಿನೊಂದಿಗೆ ತಮ್ಮ ಮನೆಯಿಂದ ಹೊರಬರುತ್ತಿರುವುದು (ಎಡಚಿತ್ರ) ಬೆಳಗಾವಿ ಜಿಲ್ಲೆಯ ಕೌಜಲಗಿ ಸಮೀಪದ ರಡ್ಡೇರಟ್ಟಿ ಯಾದವಾಡ ಹಳ್ಳದ ರಸ್ತೆಯಲ್ಲಿ ಸಕ್ಕರೆ ಚೀಲ ತುಂಬಿದ ಲಾರಿ ಪಲ್ಟಿಯಾಗಿದೆ.
ಕಲಬುರ್ಗಿಯ ಪೂಜಾ ಕಾಲೊನಿಯಲ್ಲಿ ಹರಿಯುತ್ತಿದ್ದ ಮಳೆ ನೀರನ್ನು ದಾಟಲು ಅಳವಡಿಸಿದ್ದ ಏಣಿ ಮೇಲೆ ಮಹಿಳೆಯೊಬ್ಬರು ಮಗುವಿನೊಂದಿಗೆ ತಮ್ಮ ಮನೆಯಿಂದ ಹೊರಬರುತ್ತಿರುವುದು (ಎಡಚಿತ್ರ) ಬೆಳಗಾವಿ ಜಿಲ್ಲೆಯ ಕೌಜಲಗಿ ಸಮೀಪದ ರಡ್ಡೇರಟ್ಟಿ ಯಾದವಾಡ ಹಳ್ಳದ ರಸ್ತೆಯಲ್ಲಿ ಸಕ್ಕರೆ ಚೀಲ ತುಂಬಿದ ಲಾರಿ ಪಲ್ಟಿಯಾಗಿದೆ.   
"ರಾಯಚೂರಿನ ಬಸವನಭಾವಿ ಚೌಕ್‌ ಸಮೀಪ ರಾಜ್ಯಹೆದ್ದಾರಿಯಲ್ಲಿ ಹರಿಯುತ್ತಿದ್ದ ನೀರಿನ ರಭಸಕ್ಕೆ ‌ಬೈಕ್‌ ಕೊಚ್ಚಿಹೋಗುವುದನ್ನು ತಡೆಯಲು ಸವಾರ ಹರಸಾಹಸಪಟ್ಟರು."
""

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಭಾರಿ ಮಳೆ ಆಗಿದೆ. ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಒಂಟಗೋಡಿ ಗ್ರಾಮದ ಹಳ್ಳದ ಸೇತುವೆ ಮೇಲೆ ಬೈಕ್‌ ಚಲಾಯಿಸುತ್ತಿದ್ದ ಗ್ರಾಮದ ನಿವಾಸಿ, ಬ್ಯಾಂಕ್‌ ಉದ್ಯೋಗಿ ಸಂತೋಷ ಅಡವಿ (30) ನೀರಿನ ರಭಸಕ್ಕೆ ಸಿಲುಕಿ, ಕೊಚ್ಚಿಕೊಂಡು ಹೋಗಿ ಮೃತರಾಗಿದ್ದಾರೆ. ಮೃತದೇಹ ಪತ್ತೆಯಾಗಿದೆ.

ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ನದಿ–ಹಳ್ಳಗಳು ಉಕ್ಕಿ ಹರಿಯುತ್ತಿವೆ. ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.ಎರಡು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

ADVERTISEMENT

ಕಲಬುರ್ಗಿ ನಗರದ ಮುಖ್ಯರಸ್ತೆಯ 60ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಕಾಗಿಣಾ ನದಿ ಪ್ರವಾಹದಿಂದಾಗಿ ಮಳಖೇಡ ಬಳಿಯ ಸೇತುವೆ ಮುಳುಗಿದೆ.ಕಲಬುರ್ಗಿ– ಉದನೂರು, ಮುಧೋಳ– ಕೊತ್ತಪಲ್ಲಿ ರಸ್ತೆಗಳ ಮೇಲೆ ನೀರು ನುಗ್ಗಿ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಜೇವರ್ಗಿ ಪಟ್ಟಣದ ಮುಖ್ಯರಸ್ತೆ ಕೊಚ್ಚಿಕೊಂಡು ಹೋಗಿದೆ.

ಕಾಳಗಿಯ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ, ಚಿಂಚೋಳಿ ತಾಲ್ಲೂಕಿನ ರುದ್ನೂರು ಗ್ರಾಮದ ಐತಿಹಾಸಿಕ ತೋಂಟದ ಸಿದ್ಧೇಶ್ವರ ಮಠ, ಮಳಖೇಡ ಸಮೀಪದ ಉತ್ತರಾದಿಮಠ ಜಲಾವೃತವಾಗಿವೆ.

‘ಜಿಲ್ಲೆಯಲ್ಲಿ ಮುಂಗಾರು ಆರಂಭದಿಂದ ಇಲ್ಲಿಯವರೆಗೆ ಶೇ 46ರಷ್ಟು ಹೆಚ್ಚುವರಿ ಮಳೆ ಬಿದ್ದಿದ್ದು, ದಶಕದಲ್ಲೇ ಇದು ದಾಖಲೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಭತ್ತ ಮತ್ತು ಹತ್ತಿ ಬೆಳೆ ನೆಲಕ್ಕಚ್ಚಿದೆ. ಸೈದಾಪುರ ಪಟ್ಟಣಕ್ಕೆ ಸಂರ್ಪಕ ಕಲ್ಪಿಸುವ ಬೆಳಗುಂದಿರಸ್ತೆಬಂದ್‌ ಆಗಿದೆ.

ರಾಯಚೂರು ಮತ್ತು ಲಿಂಗಸುಗೂರು ತಾಲ್ಲೂಕುಗಳಲ್ಲಿ ಅತಿಹೆಚ್ಚು ಮಳೆ ಸುರಿದಿದೆ. ಯರಮರಸ್‌ ಸಮೀಪ ಮಳೆ ನೀರಿನ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ಮಗುಚಿದ್ದು, ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೀದರ್ ಜಿಲ್ಲೆಯಔರಾದ್‌ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ.

ರಾಯಚೂರಿನ ಬಸವನಭಾವಿ ಚೌಕ್‌ ಸಮೀಪ ರಾಜ್ಯಹೆದ್ದಾರಿಯಲ್ಲಿ ಹರಿಯುತ್ತಿದ್ದ ನೀರಿನ ರಭಸಕ್ಕೆ ‌ಬೈಕ್‌ ಕೊಚ್ಚಿಹೋಗುವುದನ್ನು ತಡೆಯಲು ಸವಾರ ಹರಸಾಹಸಪಟ್ಟರು.

ಉತ್ತಮ ಮಳೆ: ಧಾರವಾಡ, ವಿಜಯಪುರ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ, ಕಾರವಾರ, ಶಿರಸಿ, ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಮಳೆಯಾಗಿದೆ.

ಬೆಳಗಾವಿ ಜಿಲ್ಲೆಯ ಕೌಜಲಗಿ ಸಮೀಪದ ರಡ್ಡೇರಟ್ಟಿ ಹಳ್ಳದ ಚಿಕ್ಕ ಸೇತುವೆ ಮೇಲೆ 260 ಚೀಲ ಸಕ್ಕರೆ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ಲಾರಿ ಚಾಲಕನಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 8 ಹಾಗೂ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನಲ್ಲಿ 21 ಮನೆಗಳಿಗೆ ಹಾನಿಯುಂಟಾಗಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಹಲವು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ನರಗುಂದ ತಾಲ್ಲೂಕಿನ ಗುರ್ಲಕಟ್ಟಿ ಗ್ರಾಮದ ಬಳಿಯ ಸೇತುವೆ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಗುರ್ಲಕಟ್ಟಿ ಹಾಗೂ ಕಣಕೀಕೊಪ್ಪದಿಂದ ನರಗುಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್‌ ಆಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿಅತಿ ಹೆಚ್ಚು, 10.03 ಸೆಂ.ಮೀ ಮಳೆ ದಾಖಲಾಗಿದೆ. 15 ಮನೆಗಳು ಕುಸಿದಿವೆ. ರಬಕವಿ ಬನಹಟ್ಟಿಯಲ್ಲಿ ಶುಕ್ರವಾರ ಸಂಜೆ ಮತ್ತು ಶನಿವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ಸ್ಥಳೀಯ ಪೊಲೀಸ್‍ ಠಾಣೆಯ ಹಿಂಭಾಗದಲ್ಲಿರುವ ಅಂಜುಮನ್‍ ಎ ಇಸ್ಲಾಂ ಸರ್ಕಾರಿ ಕನ್ನಡ ಗಂಡು ಮಕ್ಕಳ ಉರ್ದು ಶಾಲೆಯ ಕಟ್ಟಡ ಕುಸಿದುಬಿದ್ದಿದೆ.

ಕೊಡಗು, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.