ADVERTISEMENT

ಕೊಡಗು, ಉತ್ತರಕನ್ನಡದಲ್ಲಿ ಭಾರಿ ಮಳೆ: ‘ರೆಡ್ ಅಲರ್ಟ್‌’ ಘೋಷಣೆ, ಶಾಲೆಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 3:35 IST
Last Updated 23 ಜುಲೈ 2019, 3:35 IST
ಕಾರವಾರದ ಬೈತಖೋಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಹರಿದ ಮಳೆ ನೀರಿನಲ್ಲಿ ವಾಹನಗಳು ಸಾಗಿದವು
ಕಾರವಾರದ ಬೈತಖೋಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಹರಿದ ಮಳೆ ನೀರಿನಲ್ಲಿ ವಾಹನಗಳು ಸಾಗಿದವು   

ಕಾರವಾರ: ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರವೂ (ಜುಲೈ 23) ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ‘ರೆಡ್ ಅಲರ್ಟ್’ ಘೋಷಿಸಿದೆ.

ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾದ ಪರಿಣಾಮ ‘ಆರೆಂಜ್‌ ಅಲರ್ಟ್‌’ ಘೋಷಣೆ ಮಾಡಲಾಗಿತ್ತು. ಮಳೆ ಮತ್ತೆ ತೀವ್ರತೆ ಪಡೆಯುವ ಸಾಧ್ಯತೆ ಇರುವುದರಿಂದ ಜುಲೈ 24ರವರೆಗೆ ‘ರೆಡ್‌ ಅಲರ್ಟ್‌‘ ಘೋಷಿಸಲಾಗಿದ್ದು, 204 ಮಿ.ಮೀಗಿಂತ ಅಧಿಕ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಕೋರಿದ್ದಾರೆ. ಪ್ರಕೃತಿ ವಿಕೋಪ ಸಂಬಂಧ ಸಹಾಯವಾಣಿ ಆರಂಭಿಸಲಾಗಿದ್ದು ಸಮಸ್ಯೆಯಾದರೆ ದೂರವಾಣಿ: 08272 221077 ಹಾಗೂ ಮೊಬೈಲ್‌: 85500 01077 ಸಂಪರ್ಕಿಸಲು ಕೋರಲಾಗಿದೆ.

ಶಾಲಾ–ಕಾಲೇಜುಗಳಿಗೆ ರಜೆ
ಕಾರವಾರ:
ಭಾರಿ ಮಳೆ ಬೀಳುವ ಮುನ್ಸೂಚನೆ ಇರುವ ಕಾರಣ ಜಿಲ್ಲೆಯ ಕರಾವಳಿ ತಾಲ್ಲೂಕುಗಳ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.

ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ‌ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಹವಾಮಾನ ಇಲಾಖೆಯಿಂದ ಈ ಭಾಗಕ್ಕೆ ‘ರೆಡ್ ಅಲರ್ಟ್’ಪ್ರಕಟವಾಗಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸುವಂತೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಅವರಿಗೆ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಸೂಚನೆ ನೀಡಿದ್ದಾರೆ.

ಇಂದು ನೀಡಲಾಗಿರುವ ರಜೆಯಿಂದ ನಷ್ಟವಾದ ತರಗತಿಗಳನ್ನು ಭಾನುವಾರ ಹಮ್ಮಿಕೊಂಡು ಸರಿದೂಗಿಸಿಕೊಳ್ಳುವಂತೆಯೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.