ADVERTISEMENT

ಯಾದಗಿರಿ,ರಾಯಚೂರಿನಲ್ಲಿ ಮಳೆಗೆ ಭತ್ತ ನೀರುಪಾಲು

ಭತ್ತ ನೀರುಪಾಲು; ಸಂಕಷ್ಟದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:30 IST
Last Updated 24 ನವೆಂಬರ್ 2021, 20:30 IST
ರಾಯಚೂರು ಜಿಲ್ಲೆಯ ಜಾಲಹಳ್ಳಿ ಹೋಬಳಿಯ ಗಲಗ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ ಸಂಪೂರ್ಣ ಭತ್ತ ನೀರುಪಾಲಾಗಿರುವುದು
ರಾಯಚೂರು ಜಿಲ್ಲೆಯ ಜಾಲಹಳ್ಳಿ ಹೋಬಳಿಯ ಗಲಗ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ ಸಂಪೂರ್ಣ ಭತ್ತ ನೀರುಪಾಲಾಗಿರುವುದು   

ಕಲಬುರಗಿ: ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ, ಗುರುಮಠಕಲ್, ವಡಗೇರಾ ತಾಲ್ಲೂಕು ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಭತ್ತ ಹಾನಿಯಾಗಿದೆ.

ಆಲಿಕಲ್ಲು ಮಳೆ

ಆಲಿಕಲ್ಲು ಮಳೆಯಿಂದ ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ಗಲಗ, ಮೇದಿನಾಪುರ, ಕರಡಿಗುಡ್ಡ, ಮ್ಯಾಕಲ್‌ದೊಡ್ಡಿ ಸೇರಿ 50ಕ್ಕೂ ಹೆಚ್ಚು ಗ್ರಾಮಗಳಲ್ಲಿಯ ಭತ್ತ ನೀರುಪಾಲಾಗಿದೆ.

ADVERTISEMENT

‘10 ದಿನಗಳಲ್ಲಿ ಕಟಾವು ಆಗಬೇಕಿದ್ದ ಭತ್ತವು ನೀರುಪಾಲಾಗಿದೆ. ಸಾಧ್ಯವಾದಷ್ಟು ಬೇಗ ನಷ್ಟದ ಬಗ್ಗೆ ವರದಿ ಸಿದ್ದಪಡಿಸುತ್ತೇವೆ‌’ ಎಂದು ದೇವದುರ್ಗ ತಹಶೀಲ್ದಾರ್ ಶ್ರೀನಿವಾಸ ಚಂಪಾಲ್ ತಿಳಿಸಿದರು.

ಯಾದಗಿರಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಕಟಾವು ಹಂತಕ್ಕೆ ಬಂದಿದ್ದ ಭತ್ತ ನೆಲಕಚ್ಚಿದೆ.

ವಡಗೇರಾ ತಾಲ್ಲೂಕಿನ ಗುರುಸಣಿಗಿ ಸಮೀಪ ಒಣಗಲು ಹಾಕಿದ್ದ ಭತ್ತ ಮಳೆಯಿಂದ ಮೊಳಕೆಯೊಡೆದಿದೆ. ಜೋಳ ಮತ್ತು ಹತ್ತಿ ಜಮೀನುಗಳಲ್ಲಿ ನೀರು ನಿಂತಿದೆ.

ಬಾದಾಮಿಯಲ್ಲಿ ಧಾರಾಕಾರ ಮಳೆ

ಹುಬ್ಬಳ್ಳಿ: ಬೆಳಗಾವಿ ನಗರ ಮತ್ತು ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ಬೆಳಿಗ್ಗೆ ಗುಡುಗು ಸಹಿತ ಸಾಧಾರಣ ಮಳೆಯಾಯಿತು. ಬಾಗಲಕೋಟೆಯ ಬಾದಾಮಿ, ತೇರದಾಳದಲ್ಲಿ ಧಾರಾಕಾರ ಮಳೆಯಾಗಿದೆ.

ಬಾಗಲಕೋಟೆಯ ಬಾದಾಮಿಯಲ್ಲಿ ಎರಡು ದಿನ ಬಿಡುವು ನೀಡಿದ್ದ ಮಳೆ ಬೆಳಗಿನ ಜಾವ ಒಮ್ಮಿಂದೊಮ್ಮೆಲೆ ರಭಸದಿಂದ ಸುರಿಯಿತು. ಅಲ್ಲಿನ ಪೂರ್ವ ದಿಕ್ಕಿನ ಬೆಟ್ಟದ ಮೇಲಿನ ಬೃಹತ್ ಬಂಡೆಯ ಮೇಲಿಂದ ಜೋಡಿ ಜಲಧಾರೆಗಳು ಭೂತನಾಥ ದೇವಾಲಯದ ಎದುರಿನ ಅಗಸ್ತ್ಯತೀರ್ಥ ಹೊಂಡಕ್ಕೆ ಧುಮ್ಮಿಕ್ಕಿದವು.ತೇರದಾಳ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದೆ. ಕಟಾವಿಗೆ ಬಂದ ನೂರಾರು ಎಕರೆ ಕಬ್ಬು ನೆಲಕ್ಕುರುಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.