ADVERTISEMENT

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ: ಕೋಡಿ ಬಿದ್ದ ಕೆರೆಗಳು, ಬೆಳೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 5:49 IST
Last Updated 11 ಅಕ್ಟೋಬರ್ 2022, 5:49 IST
ಹರಪನಹಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅತಿವೃಷ್ಟಿಗೆ ಈರುಳ್ಳಿ ಬೆಳೆ ಹಾನಿಯಾಗಿರುವುದನ್ನು ತೋರಿಸುತ್ತಿರುವ ರೈತ
ಹರಪನಹಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅತಿವೃಷ್ಟಿಗೆ ಈರುಳ್ಳಿ ಬೆಳೆ ಹಾನಿಯಾಗಿರುವುದನ್ನು ತೋರಿಸುತ್ತಿರುವ ರೈತ   

ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ರಾತ್ರಿ ಮತ್ತು ಸೋಮವಾರ ಧಾರಾಕಾರ ಮಳೆಯಾಗಿದೆ.

ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನದಲ್ಲಿ ಬೆಳೆಗಳು ಜಲಾವೃತವಾಗಿವೆ. ಕೆರೆಗಳು ಕೋಡಿ ಬಿದ್ದಿವೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು.

ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿಯ ಮುದ್ದನಹಳ್ಳಿಯಲ್ಲಿ ಕೆರೆ ಕೋಡಿ ಬಿದ್ದು, ಮುಸುಕಿನ ಜೋಳ, ಭತ್ತ, ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಹಾನಿಯಾಗಿದೆ. ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಹಳಗಟ್ಟೆ ಕೆರೆ ಕೋಡಿ ಬಿದ್ದು, ಭತ್ತದ ಬೆಳೆ ಜಲಾ ವೃತವಾಗಿದೆ.

ADVERTISEMENT

ಚಾಮರಾಜನಗರ ಜಿಲ್ಲೆಯಯಳಂದೂರು ತಾಲ್ಲೂಕಿನ ಯರಿಯೂರಿನಲ್ಲಿ ಮನೆ ಗೋಡೆ ಕುಸಿದಿದೆ. ‌

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ಹೋಟೆಲ್, ಅಂಗಡಿ, ಬೈಕ್ ಸ್ಟ್ಯಾಂಡ್‌, ಬೇಕರಿಗೆ ನೀರು ನುಗ್ಗಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್‌.ನಗರ ತಾಲ್ಲೂಕಿನ ಮೂಡಲಕೊಪ್ಪಲು- ಕಂಠೇನಹಳ್ಳಿ ಬಳಿ ಚಾಮರಾಜ ಬಲ ದಂಡೆ ನಾಲೆಯ ಗೋಡೆ ಭಾನು ವಾರ ರಾತ್ರಿ ಕುಸಿದಿದ್ದು, ಅಪಾರ ನೀರು ಪೋಲಾಗಿದೆ. ಹುಣಸೂರಿನ ಮಂಜುನಾಥ ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಹುಣಸೂರಿನಲ್ಲಿ 21 ಸೆಂ.ಮೀ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಧಾರವಾಡ, ಬೆಳಗಾವಿ , ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ.

ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ–ವಹಿವಾಟಿಗೆ ತೊಡಕಾಯಿತು. ಹಾವೇರಿಯ ತಡಸದಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆ ಭಾರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.