ADVERTISEMENT

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬಿಇಎಂಎಲ್‌ ಮುಖ್ಯಸ್ಥ ಖುಲಾಸೆ

​ಪ್ರಜಾವಾಣಿ ವಾರ್ತೆ
Published 27 ಮೇ 2025, 8:17 IST
Last Updated 27 ಮೇ 2025, 8:17 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಭಾರತ್‌ ಅರ್ತ್‌ ಮೂವರ್ಸ್‌ ಲಿಮಿಟೆಡ್‌ನ (ಬಿಇಎಂಎಲ್‌) ಮಾಜಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ.ಆರ್‌.ಎಸ್‌ ನಟರಾಜನ್‌ ಅವರನ್ನು ಹೈಕೋರ್ಟ್‌, ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆದಿಂದ ಖುಲಾಸೆಗೊಳಿಸಿದೆ.

ಈ ಸಂಬಂಧ ಚೆನ್ನೈನ ವಿ.ಆರ್.ಎಸ್‌.ನಟರಾಜನ್‌ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ರಾಚಯ್ಯ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ಅರ್ಜಿದಾರರ ಕುಟುಂಬದ ಸದಸ್ಯರ ಸ್ವತಂತ್ರ ಆದಾಯ ಮೂಲವನ್ನೂ ಪರಿಗಣಿಸಬೇಕಿತ್ತು. ಆದರೆ, ಸಿಬಿಐ ಅದನ್ನು ಪರಿಗಣಿಸಿಲ್ಲ ಮತ್ತು ಚುರುಕಿನಿಂದ ತನಿಖೆ ನಡೆಸಿಲ್ಲ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಿದೆ.

ADVERTISEMENT

ಪ್ರಕರಣವೇನು?: ‘ನಟರಾಜನ್‌ ಅವರು 2002ರ ಡಿಸೆಂಬರ್ 1ರಿಂದ 2012ರ ಏ‍ಪ್ರಿಲ್‌ 19ರವರೆಗೆ ತಮ್ಮ ಆದಾಯ ಮೂಲಕ್ಕೂ ಹೆಚ್ಚಾಗಿ ಸಂಪಾದನೆ ಮಾಡಿದ್ದಾರೆ’ ಎಂದು ದೂರಲಾಗಿತ್ತು. ಇದನ್ನು ಆಧರಿಸಿ ಸಿಬಿಐ ಶೋಧ ಮತ್ತು ಜಪ್ತಿ ನಡೆಸಿ ಎಫ್‌ಐಆರ್‌ ದಾಖಲಿಸಿತ್ತು. ಅಂತೆಯೇ, ತನಿಖೆ ನಡೆಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 13(2)ರ ಜೊತೆಗೆ 13(1)(ಇ) ಅಡಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆರೋಪದಿಂದ ಖುಲಾಸೆಗೊಳಿಸುವಂತೆ ಕೋರಿ ನಟರಾಜನ್‌ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.