ಹೈಕೋರ್ಟ್ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (ಒಳಚಿತ್ರ)
ಬೆಂಗಳೂರು: ‘ಧರ್ಮಸ್ಥಳದ ಆಜುಬಾಜಿನ ಸ್ಥಳಗಳಲ್ಲಿ ನೂರಾರು ಅನಾಮಧೇಯ ಹೆಣ್ಣು ಮಕ್ಕಳ ಮೃತದೇಹಗಳನ್ನು ಕಾನೂನುಬಾಹಿರವಾಗಿ ದಫನ ಮಾಡಲಾಗಿದೆ ಎಂಬ ದೂರುದಾರ ಚಿನ್ನಯ್ಯನ ಹೇಳಿಕೆಗಳು ಆತನ ಸ್ವಂತ ಹೇಳಿಕೆಗಳಲ್ಲ. ಅವೆಲ್ಲ ಸುಳ್ಳು’ ಎಂದು ರಾಜ್ಯ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
‘ಧರ್ಮಸ್ಥಳ ಗ್ರಾಮದಲ್ಲಿ ನಾವು ಗುರುತಿಸಿರುವ ಸ್ಥಳಗಳಲ್ಲಿ ಅಗೆಯಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶನ ನೀಡಬೇಕು’ ಎಂದು ಕೋರಿ ಪಾಂಗಾಳ ನಿವಾಸಿ ಪಾಂಡುರಂಗ ಗೌಡ (38) ಮತ್ತು ತುಕಾರಾಂ ಗೌಡ (48) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ನ್ಯಾಯಪೀಠಕ್ಕೆ ಈ ಕುರಿತಂತೆ ವಿವರಿಸಿದರು.
‘ಬೇರೊಬ್ಬರ ಆಣತಿಯ ಪ್ರಕಾರ ಚಿನ್ನಯ್ಯ ಕೋರ್ಟ್ ಮುಂದೆ ಹೇಳಿಕೆ ದಾಖಲಿಸಿದ್ದಾನೆ. ಈತನ ಹಿಂದೆ ಕೆಲಸ ಮಾಡುತ್ತಿರುವ ಗುಂಪಿನ ಪಿತೂರಿ ಅಥವಾ ಉದ್ದೇಶವೇನು ಎಂಬುದನ್ನು ತನಿಖೆಯ ಮುಖಾಂತರ ಪತ್ತೆ ಹಚ್ಚುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ಚಿನ್ನಯ್ಯ 2014ರಲ್ಲಿ ಧರ್ಮಸ್ಥಳ ತೊರೆದು ಆನಂತರ ಅಲ್ಲಿಗೆ ಬಂದಿಲ್ಲ ಎಂಬುದಾಗಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆ ಸುಳ್ಳು. ಆತ ಈಗ್ಗೆ ಎರಡು ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದಾನೆ. ‘ಇಬ್ಬರು ನನಗೆ ಬುರುಡೆ ಕೊಟ್ಟು ಏನು ಹೇಳಬೇಕು ಎಂಬುದನ್ನು ತಿಳಿಸಿದ ರೀತಿಯಲ್ಲಿ ನಾನು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದೇನೆ’ ಎಂಬುದು ಆತನ ವಿವರಣೆಯಾಗಿದೆ’ ಎಂದರು.
‘ಚಿನ್ನಯ್ಯ ಹೇಳಿದ 13 ಸ್ಥಳಗಳಲ್ಲಿ ಶೋಧ ನಡೆಸಿದಾಗ, ಅಸ್ಥಿಪಂಜರ ಸಿಕ್ಕಿದ್ದು ಒಂದೇ ಸ್ಥಳದಲ್ಲಿ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಿಕ್ಕ ಮೂಳೆಗಳು ಅಂದಾಜು 30 ವರ್ಷಗಳ ಪುರುಷನದ್ದು ಎಂದು ಗೊತ್ತಾಗಿದೆ. ಮತ್ತೊಂದು ಭೂಮಿಯ ಮೇಲ್ಭಾಗದಲ್ಲಿ ಸಿಕ್ಕಿದ್ದು, ಅದು ಕೂಡಾ ಪುರುಷನ ಅಸ್ಥಿ ಪಂಜರವಾಗಿದೆ’ ಎಂದು ಜಗದೀಶ್ ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಹಾಜರಾಗಿದ್ದ ದೆಹಲಿ ಹೈಕೋರ್ಟ್ ವಕೀಲ ದೀಪಕ್ ಖೋಸ್ಲಾ, ‘ಅರ್ಜಿದಾರರು ಎಸ್‌ಐಟಿಗೆ ಕಳೆದ ತಿಂಗಳ 29ರಂದು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ನ್ಯಾಯಪೀಠ ನಿರ್ದೇಶನ ನೀಡಬೇಕು’ ಎಂದು ಪುನರುಚ್ಚರಿಸಿದರು.
ಇದನ್ನು ನಿರಾಕರಿಸಿದ ನ್ಯಾಯಪೀಠ, ‘ನಿಮ್ಮ ಬಳಿ ಹೊಸ ಅಂಶ ಏನಾದರೂ ಇದ್ದರೆ ಅದನ್ನು ವಿವರಿಸಿ. ಅದನ್ನು ಮುಂದಿನ ವಿಚಾರಣೆಯಲ್ಲಿ ಪರಿಶೀಲಿಸೋಣ’ ಎಂದು ವಿಚಾರಣೆ ಮುಂದೂಡಿತು. ಇದೇ ವೇಳೆ ‘ಚಿನ್ನಯ್ಯನ ಹೇಳಿಕೆಯನ್ನು ಸಿಆರ್‌ಪಿಸಿ ಕಲಂ 183ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಇನ್ನೂ ಯಾಕೆ ದಾಖಲು ಮಾಡಿಕೊಳ್ತಿಲ್ಲ. ಅವರ ಈ ನಡೆ ತುಂಬಾ ಆಶ್ಚರ್ಯಕರವಾಗಿದೆ’ ಎಂದೂ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.
ಚಿನ್ನಯ್ಯನ ಹೇಳಿಕೆ ಆಧರಿಸಿ ಮತ್ತಷ್ಟು ಸ್ಥಳಗಳಲ್ಲಿ ಅಗೆಯಲು ನಿರ್ದೇಶಿಸಬೇಕು ಎಂದು ಕೋರಿದ್ದೀರಿ. ನಿಮಗೆ ಅವಕಾಶ ಕೊಟ್ಟರೆ ಇನ್ನೂ 10 ಜನರು ಬಂದು ನಾವು ಹೇಳಿದ ಸ್ಥಳಗಳಲ್ಲಿ ಅಗೆಯಲು ನಿರ್ದೇಶಿಸಬೇಕು ಎನ್ನುತ್ತಾರೆ.– ಎಂ.ನಾಗಪ್ರಸನ್ನ, ನ್ಯಾಯಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.