ADVERTISEMENT

ನಿಂಗಪ್ಪ ಸಾವಂತ್‌ ವಿರುದ್ಧದ ಎಫ್‌ಐಆರ್‌ಗೆ ತಡೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 0:30 IST
Last Updated 19 ಜೂನ್ 2025, 0:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಸುಲಿಗೆ ದಂಧೆಯಲ್ಲಿ ಭಾಗಿಯಾದ ಆರೋಪದಡಿ ಬಂಧನಕ್ಕೊಳಗಾಗಿರುವ ಲೋಕಾಯುಕ್ತದ ಮಾಜಿ ಹೆಡ್‌ ಕಾನ್‌ಸ್ಟೆಬಲ್‌ ನಿಂಗಪ್ಪ ಸಾವಂತ್‌ ವಿರುದ್ಧದ ಎಫ್‌ಐಆರ್‌ ಮತ್ತು ಮುಂದಿನ ನ್ಯಾಯಿಕ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಹೊಳಲ್ಕೆರೆ ತಾಲ್ಲೂಕು ತಾಳಿಕಟ್ಟೆಯ ನಿಂಗಪ್ಪ ಜಿ.ಅಲಿಯಾಸ್ ನಿಂಗಪ್ಪ ಸಾವಂತ್‌ (45) ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನಿಂಗಪ್ಪ ಪರ ಹೈಕೋರ್ಟ್‌ ವಕೀಲ ವೆಂಕಟೇಶ ಪಿ.ದಳವಾಯಿ ಮಂಡಿಸಿದ ವಾದ ಪುರಸ್ಕರಿಸಿದ ನ್ಯಾಯಪೀಠ, ಎಫ್‌ಐಆರ್‌ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ಮುಂದಿನ ವಿಚಾರಣೆ ತನಕ ಮಧ್ಯಂತರ ತಡೆ ನೀಡಿ ಆದೇಶಿಸಿತು. ಪ್ರತಿವಾದಿ ಲೋಕಾಯುಕ್ತ ಪೊಲೀಸ್‌ ಪರ ವಿಶೇಷ ಪ್ರಾಸಿಕ್ಯೂಟರ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.

ADVERTISEMENT

‘ಭ್ರಷ್ಟ ಅಧಿಕಾರಿಗಳ ವಿರುದ್ಧ ನಡೆಸಲಾಗುವ ದಾಳಿಗಳ ಕುರಿತಂತೆ ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಮತ್ತು ದಾಳಿಗಳ ಬಗ್ಗೆ ಮುಂಗಡ ಮಾಹಿತಿಯನ್ನು ನಿಂಗಪ್ಪ ಸೋರಿಕೆ ಮಾಡುತ್ತಿದ್ದರು’ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದ್ದು,  ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ವಿವಿಧ ಕಲಂಗಳಡಿ ನ್ಯಾಯಿಕ ಪ್ರಕ್ರಿಯೆಗೆ ಕ್ರಮ ಜರುಗಿಸಲಾಗಿತ್ತು.

ಮತ್ತೊಂದು ಅರ್ಜಿ?:

‘ನಿಂಗಪ್ಪ ಅವರನ್ನು ಪೊಲೀಸರು 2025ರ ಮೇ 31ರಂದು ಹೊಸದುರ್ಗದಲ್ಲಿ ಬಂಧಿಸಿದ್ದಾರೆ. ಆದರೆ, ದಾಖಲೆಗಳಲ್ಲಿ ಬಂಧನವನ್ನು 2025ರ ಜೂನ್ 2ರಂದು ಬೆಂಗಳೂರಿನ ರಾಜಾಜಿ ನಗರದ ಮಾರುತಿ ಮೈದಾನದಲ್ಲಿ ಎಂದು ತೋರಿಸಲಾಗಿದೆ. ಈ ಬಂಧನ ಅಕ್ರಮವಾಗಿದ್ದು, ಪೊಲೀಸರು ಬಂಧನಕ್ಕೂ ಮುನ್ನ ಆರೋಪಿಗೆ ನೀಡಬೇಕಾದ ಸೂಕ್ತ ಆಧಾರಗಳನ್ನು ಒದಗಿಸಿಲ್ಲ. ಆದ್ದರಿಂದ, ಅವರನ್ನು ಕೂಡಲೇ ಬಿಡುಗಡೆ ಮಾಡಲು ಆದೇಶಿಸಬೇಕು’ ಎಂದು ಕೋರಿ ಅವರ ಪತ್ನಿ ಜಿ.ಕೆ.ಚಂದ್ರಕಲಾ ಹೈಕೋರ್ಟ್‌ನಲ್ಲಿ ಪ್ರತ್ಯೇಕ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿ ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.