ADVERTISEMENT

ಎಚ್‌ಎಸ್‌ಆರ್‌ಪಿ ಅಳವಡಿಕೆ: ಕೇವಲ ಶೇ 5ರಷ್ಟು ಪ್ರಗತಿ

ಹೊಸ ಸುರಕ್ಷಿತ ನಂಬರ್‌ ಪ್ಲೇಟ್‌ ಅಳವಡಿಸದ ಶೇ 95ರಷ್ಟು ವಾಹನಗಳು * ಅವಧಿ ವಿಸ್ತರಣೆ ಸಾಧ್ಯತೆ

ಬಾಲಕೃಷ್ಣ ಪಿ.ಎಚ್‌
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ   

ಬೆಂಗಳೂರು: ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವು ಮುಗಿಯಲು ಕೆಲವೇ ದಿನಗಳು ಬಾಕಿ ಉಳಿದಿವೆ. ಇಲ್ಲಿವರೆಗೆ ಶೇ 5ರಷ್ಟು ವಾಹನಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಅತಿ ಕಡಿಮೆ ಪ್ರಗತಿ ಸಾಧಿಸಿರುವುದರಿಂದ ಅವಧಿ ವಿಸ್ತರಿಸಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಅಪರಾಧ ಕಡಿಮೆ ಮಾಡಲು, ವಾಹನಗಳನ್ನು ಸುಲಭದಲ್ಲಿ ಪತ್ತೆ ಹಚ್ಚಲು, ನಕಲಿ ನಂಬರ್‌ಗಳನ್ನು ತಡೆಗಟ್ಟಲು ಎಚ್‌ಎಸ್‌ಆರ್‌ಪಿ ಅಳವಡಿಸುವುದು ಅಗತ್ಯ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ತಿಳಿಸಿತ್ತು. 2018ರ ಡಿ.4ರಂದು ಸಿಎಂವಿಆರ್‌ ಕಾಯ್ದೆಗೆ ತಿದ್ದುಪಡಿ ಮಾಡಿ ಇನ್ನು ಮುಂದೆ ತಯಾರಿಸುವ ಎಲ್ಲ ವಾಹನಗಳಿಗೆ ಅತಿಸುರಕ್ಷಿತ ನೋಂದಣಿ ಫಲಕ ಕಡ್ಡಾಯಗೊಳಿಸಲಾಯಿತು. 2019ರ ಏ.1ರಿಂದ ಜಾರಿಗೆ ಬಂದಿದ್ದು, ಅದಕ್ಕಿಂತ ಮೊದಲು ನೋಂದಣಿಯಾಗಿದ್ದ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ಅಳವಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿತ್ತು.

2023ರ ನವೆಂಬರ್‌ 17ರ ಒಳಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವಂತೆ ಆಗಸ್ಟ್‌ನಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆದರೆ, ವಾಹನ ಮಾಲೀಕರು ಹೊಸ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ಉತ್ಸಾಹ ತೋರಿರಲಿಲ್ಲ. ವಾಹನಗಳ ಮೂಲ ತಯಾರಿಕಾ ಸಂಸ್ಥೆಗಳು ಅನುಮತಿ ನೀಡಿದ ಏಜೆನ್ಸಿಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವ ಅವಕಾಶವನ್ನು ನೀಡಿರುವುದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಎಲ್ಲ ಕಾರಣದಿಂದ ಶೇ 1ರಷ್ಟೂ ಪ್ರಗತಿ ಆಗಿರಲಿಲ್ಲ.

ADVERTISEMENT

ಅದಕ್ಕಾಗಿ ಮತ್ತೆ ಮೂರು ತಿಂಗಳ ಅವಕಾಶ ನೀಡಲಾಗಿತ್ತು. ಫೆ.17 ಕೊನೇ ದಿನವಾಗಿದ್ದು, ವಾಹನ ಮಾಲೀಕರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಪರಿಣಾಮ ಶೇ 95ರಷ್ಟು ವಾಹನಗಳಿಗೆ ಇನ್ನೂ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿಲ್ಲ.

15 ದಿನಗಳಲ್ಲಿ ಮಾಡಿ: ‘ತೆರೆದ ಮಾರುಕಟ್ಟೆಯಲ್ಲಿ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹಾಲೊಗ್ರಾಮ್‌, ಐಎನ್‌ಡಿ ಮಾರ್ಕ್‌, ಇಂಡಿಯಾ ಎಂದು ಬರೆದಿರುವ ನಂಬರ್‌ ಪ್ಲೇಟ್‌ ಅಳವಡಿಸುವಂತಿಲ್ಲ. ಅಸಲಿ ಎಚ್‌ಎಸ್‌ಆರ್‌ಪಿ ಅಳವಡಿಸದೇ ಇದ್ದರೆ ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು/ರದ್ದತಿ, ಅರ್ಹತಾ ಪತ್ರ ನವೀಕರಣ ಮಾಡಲಾಗುವುದಿಲ್ಲ. ಅವಧಿ ಮುಗಿಯಲು ಇನ್ನೂ 15 ದಿನಗಳಿವೆ. ಅದರೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್‌ ತಿಳಿಸಿದ್ದಾರೆ.

ವಾಹನ ಮಾಲೀಕರು http//transport.karnataka.gov.in ಅಥವಾ www.siam.in  ಮೂಲಕ ನಿಗದಿತ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಂಡವರು ಒಂದು ತಿಂಗಳ ಒಳಗೆ ಫಲಕ ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ. 

ಜಾಗೃತಿ ಮೂಡಿಸಿ

ಅತಿ ಸುರಕ್ಷಿತ ನೋಂದಣಿ ಫಲಕ ಎಲ್ಲ ವಾಹನಗಳಿಗೆ ಅಳವಡಿಸುವುದು ಒಳ್ಳೆಯದು. ಆದರೆ ವಾಹನ ಮಾಲೀಕರಿಗೆ ಈ ಬಗ್ಗೆ ಸರಿಯಾಗಿ ಜಾಗೃತಿ ಮೂಡಿಸುವ ಕಾರ್ಯವಾಗಿಲ್ಲ. ಮೊದಲು ಎಲ್ಲರಿಗೂ ಜಾಗೃತಿ ಮೂಡಿಸಬೇಕು. ಎಚ್‌ಎಸ್‌ಆರ್‌ಪಿ ಅಳವಡಿಸಲು ಈಗ ನೀಡಿರುವ ಅವಧಿ ಸಾಲದು. ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಬೆಂಗಳೂರು ಸಾರಥಿ ಸೇನೆ ಅಧ್ಯಕ್ಷ ಬಿ. ರಾಮೇಗೌಡ ಆಗ್ರಹಿಸಿದರು.

ಚುನಾವಣೆ ಮುಗಿದ ಮೇಲೆ ಬಿಗಿ

‘ಫೆ.17ರ ಒಳಗೆ ಎಲ್ಲರೂ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು. ಅವಧಿ ವಿಸ್ತರಣೆ ಬಗ್ಗೆ ಈಗ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಈ ಅವಧಿಯಲ್ಲಿ ಎಷ್ಟು ವಾಹನಗಳು ಅಳವಡಿಸಿಕೊಳ್ಳುತ್ತವೆ ಎಂದು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಚುನಾವಣೆ ಮುಗಿದ ಮೇಲೆ ಬಿಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.