ADVERTISEMENT

ಚಾಮರಾಜಪೇಟೆಗೆ ವಲಸೆ ಹೋಗಲು ಸಿದ್ದರಾಮಯ್ಯರಿಂದ ಹಿಜಾಬ್ ವಿಚಾರ ಪ್ರಸ್ತಾಪ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2022, 6:35 IST
Last Updated 5 ಫೆಬ್ರುವರಿ 2022, 6:35 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್‌ ವಿವಾದವು ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ.

ಹಿಜಾಬ್‌ ವಿವಾದದ ಹಿಂದೆ ಕಾಂಗ್ರೆಸ್‌ ಪಕ್ಷದ ಕೈವಾಡವಿದೆ ಎಂದು ಬಿಜೆಪಿಯ ರಾಜ್ಯ ಘಟಕವು ಶನಿವಾರ ಆರೋಪಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ರಾಜಕೀಯ ಪ್ರೇರಿತ. ಇದರ ಹಿಂದೆ ಕಾಂಗ್ರೆಸ್‌ ಕೈವಾಡವಿದೆ’ ಎಂದು ಹೇಳಿದೆ.

ADVERTISEMENT

‘ಜನಮಾನಸದಿಂದ ಮಾಸಿ ಹೋಗುತ್ತಿರುವ ಕಾಂಗ್ರೆಸ್ ಪಕ್ಷ ಮತೀಯವಾದಿ ಶಕ್ತಿಗಳ ಜತೆ ಸೇರಿ ಈ ವಿವಾದವನ್ನು ವಿಸ್ತಾರಗೊಳಿಸುತ್ತಿದೆ. ಇಲ್ಲಿರುವುದು ಮತ ಬ್ಯಾಂಕ್ ರಾಜಕಾರಣ ಮಾತ್ರ’ ಎಂದು ಬಿಜೆಪಿ ಟ್ವೀಟಿಸಿದೆ.

'ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದವನ್ನು ತುರುಕಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ, ನೀವು ಸಿಎಂ ಆಗಿದ್ದಾಗ ಇದ್ದ ನಿಯಮಗಳೇ ಈಗ ಇರುವುದು. ಅಂದು ಇಲ್ಲದ ವಿವಾದ ಇಂದೇಕೆ? ಚಾಮರಾಜಪೇಟೆಗೆ ವಲಸೆ ಹೋಗುವುದಕ್ಕಾಗಿ ಸಿದ್ದರಾಮಯ್ಯ ಅವರು ಹಿಜಾಬ್ ವಿಚಾರ ಪ್ರಸ್ತಾಪಿಸುತ್ತಿದ್ದಾರೆ’ ಎಂದು ಬಿಜೆಪಿ ಹೇಳಿದೆ.

‘ಒಡೆದು ಅಳುವ ನೀತಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬ್ರಿಟಿಷರಿಂದ ಬಂದ ಬಳುವಳಿ. ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ, ಒಡೆದು ಹಾಕುವ ಕಾಂಗ್ರೆಸ್ ಆಟ ನಡೆಯಲ್ಲ. ಹಿಜಾಬ್ ಪ್ರಕರಣದ ಹಿಂದಿರುವ ‘ಕಾಣದ ಕೈ’ಗಳು ಯಾರು ಎಂಬುದು ತಿಳಿಯದಷ್ಟು ಮೂರ್ಖರು ಯಾರೂ ಇಲ್ಲ’ ಎಂದೂ ಬಿಜೆಪಿ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.