ADVERTISEMENT

ಹಿಜಾಬ್: ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿನಿಯರು ಗೈರು, ಧರಣಿ

ವಿವಿಧ ಜಿಲ್ಲೆಗಳಲ್ಲಿ ಹಿಜಾಬ್‌ ಧರಿಸಲು ಅವಕಾಶಕ್ಕೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 18:28 IST
Last Updated 21 ಫೆಬ್ರುವರಿ 2022, 18:28 IST
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಮತ್ತು ಆಂತರಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಕೋರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಮತ್ತು ಆಂತರಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಕೋರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಹಿಜಾಬ್‌ ವಿವಾದ ಸೋಮವಾರವೂ ವಿವಿಧ ಜಿಲ್ಲೆಗಳಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. ಹಿಜಾಬ್‌ ಧರಿಸಲು ಅವಕಾಶ ಕೋರಿ ಬೆಳಗಾವಿಯಲ್ಲಿ ವಿದ್ಯಾರ್ಥಿನಿಯರು ಧರಣಿ ನಡೆಸಿದ್ದಾರೆ, ವಿಜಯಪುರದಲ್ಲಿ ಪಿಯು ಪ್ರಾಯೋಗಿಕ ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ. ಮೈಸೂರು ಜಿಲ್ಲೆಯ ಗುಂಡ್ಲುಪೇಟೆ, ನಂಜನಗೂಡು ಸೇರಿ ಕೆಲವೆಡೆ ಹಿಜಾಬ್ ಧರಿಸಲು ಅವಕಾಶ ನೀಡದ ಕಾರಣ ತರಗತಿಗೆ ಹೋಗದೇ ಮನೆಗೆ ವಾಪಸಾಗಿದ್ದಾರೆ.

‘ಹಿಜಾಬ್ ಧರಿಸಿ ಕಾಲೇಜು ಹಾಗೂ ಆಂತರಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಕೊಡಬೇಕು. ಈ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಬೇಕು’ ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಬಿ.ಕಾಂ. 1ನೇ ಹಾಗೂ 3ನೇ ಸೆಮಿಸ್ಟರ್‌ನ39 ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಎಸ್‌ಡಿಪಿಐ ಮುಖಂಡರು, ವಿವಿಧ ಜಮಾತ್‌ಗಳ ಹಿರಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಗೇಟ್‌ ಬಳಿ ಮುಂಜಾಗ್ರತೆಯಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.ಆ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲಿಲ್ಲ.

ADVERTISEMENT

ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯ ಗೌತಮ್‌ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬರು, ಹಿಜಾಬ್ ಧರಿಸಲು ಅವಕಾಶ ನೀಡದ್ದಕ್ಕೆ ಪೂರ್ವಸಿದ್ಧತಾ ಪರೀಕ್ಷೆಗೆ ಹಾಜರಾಗಲಿಲ್ಲ.9ನೇ ತರಗತಿಯ ವಿದ್ಯಾರ್ಥಿನಿಯೂ ಶಾಲೆಯ ಹೊರಗೆ ಕುಳಿತು ಪ್ರತಿಭಟಿಸಿದರು.

ವಿಜಯಪುರದಲ್ಲಿ ನಗರದ ಸರ್ಕಾರಿ ಪಿಯು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾಯೋಗಿಕ ಪರೀಕ್ಷೆ ಬಹಿಷ್ಕರಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಉತ್ತರ ಕನ್ನಡ ಜಿಲ್ಲೆ ಮುಂಡಗೋಡದಲ್ಲಿಯೂ ಧರಣಿ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ಅಂಕೋಲಾ ಪಟ್ಟಣದ ಕೆ.ಎಲ್.ಇ ಪದವಿ ಪೂರ್ವ ಕಾಲೇಜು, ಬಾಗಲಕೋಟೆ ನಗರದ ಬಸವೇಶ್ವರ ವಿಜ್ಞಾನ ಪದವಿಪೂರ್ವ ಕಾಲೇಜು, ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಹಿಜಾಬ್ ತೆಗೆದು ತರಗತಿಗೆ ಬರಲುನಿರಾಕರಿಸಿದ ವಿದ್ಯಾರ್ಥಿನಿಯರು ಮನೆಗೆ ಮರಳಿದ್ದಾರೆ.

ಮೈಸೂರು ವರದಿ: ಹಾಸನ ನಗರದ ವಿವಿಧ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದು, ‘ಹಿಜಾಬ್‌ ಧರಿಸಲು ತರಗತಿಗೆ ಹಾಜರಾಗಲು ಅನುಮತಿ ಕೋರಿ’ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.‌

ಮೈಸೂರಿನಲ್ಲಿ ನಡೆದ ದ್ವಿತೀಯ ಪಿಯು ಪ್ರಯೋಗಾಲಯ ಪರೀಕ್ಷೆಗೆ ಸೋಮಮವಾರ ಎಲ್ಲರೂ ಹಾಜರಾಗಿದ್ದರು. ನಂಜನಗೂಡು ತಾಲ್ಲೂಕಿನ ಕವಲಂದೆಯಲ್ಲಿ 13, ಮೈಸೂರು ತಾಲ್ಲೂಕಿನ ಕೆ.ಆರ್.ಮಿಲ್ ಸಮೀಪದ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಗೈರಾಗಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸರ್ಕಾರಿ ಪ್ರೌಢಶಾಲೆಯ 10 ಹಾಗೂ ಎನ್‌.ಆರ್‌.ಪುರದ ಸರ್ಕಾರಿ ಪಿಯು ಕಾಲೇಜಿನ ನಾಲ್ವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ಸೋಮವಾರ ತರಗತಿಗೆ ಹಾಜರಾದರು.

ರಾಮನಗರ: ಪದವಿ ಕಾಲೇಜಿಗೆ ಅನಿರ್ದಿಷ್ಟಾವಧಿಗೆ ರಜೆ

ರಾಮನಗರ:ಹಿಜಾಬ್‌ ವಿವಾದದಿಂದಾಗಿ ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ನೀಡಿದ್ದ ರಜೆಯನ್ನು ಅನಿರ್ದಿಷ್ಟ ಅವಧಿಗೆ ವಿಸ್ತರಿಸಲಾಗಿದೆ. ಹಿಜಾಬ್ಧರಿಸಲು ಅನುಮತಿಗೆ ಒತ್ತಾಯಿಸಿ ವಿದ್ಯಾರ್ಥಿನಿಯರ ಪ್ರತಿಭಟನೆಯಿಂದಾಗಿ ಇದೇ 17ರಿಂದ ಕಾಲೇಜಿಗೆ ರಜೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಯುತ್ತಿವೆ.

‘ಗೇಟ್‌ ಬಳಿಯೇ ಅಸೈನ್‌ಮೆಂಟ್ ಒಪ್ಪಿಸಿದರು’:

ಮಂಗಳೂರು:ಹಿಜಾಬ್‌ಗೆ ಅನುಮತಿ ಕೋರಿ ತರಗತಿಗೆ ಗೈರುಹಾಜರಾಗಿರುವ, ಉಡುಪಿ ಜಿಲ್ಲೆ ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು, ಸೋಮವಾರ ಕಾಲೇಜಿನ ಗೇಟ್‌ ಬಳಿಯೇ ಉಪನ್ಯಾಸಕರಿಗೆ ಅಸೈನ್‌ಮೆಂಟ್‌ ಒಪ್ಪಿಸಿದರು.

ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆಂತರಿಕ ಅಂಕಕ್ಕಾಗಿ ಅಸೈನ್‌ಮೆಂಟ್ ಒಪ್ಪಿಸಬೇಕು. ನಾಲ್ವರು ವಿದ್ಯಾರ್ಥಿನಿಯರು ಮನೆಯಲ್ಲಿಯೇ ಅಸೈನ್‌ಮೆಂಟ್‌ ಸಿದ್ಧಪಡಿಸಿಕೊಂಡು ಬಂದಿದ್ದು, ಕಾಲೇಜು ಗೇಟ್‌ನಲ್ಲಿ ವಿಷಯದ ಉಪನ್ಯಾಸಕರಿಗೆ ಸಲ್ಲಿಸಿದರು. ಉಳಿದಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತರಗತಿಗಳು ಸುಲಲಿತವಾಗಿ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.