ADVERTISEMENT

ಮಕ್ಕಳಲ್ಲಿ ಸಾಮರಸ್ಯ ಕಾಪಾಡುವ ನಿರ್ಣಯ ಮಂಡಿಸಲು ತಯಾರಿ?

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 19:07 IST
Last Updated 14 ಫೆಬ್ರುವರಿ 2022, 19:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಾಲೆಗಳಲ್ಲಿ ಆಡೋಡಿ, ನಲಿದು ಬೆಳೆಯುವ ವಯಸ್ಸಿನಲ್ಲಿ ಪರಸ್ಪರರ ಮಧ್ಯೆ ನಂಬಿಕೆ, ಸಾಮರಸ್ಯ, ಸಹಬಾಳ್ವೆಯ ವಿಶಾಲ ಮನೋಭಾವ ಇರುವ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅಂತಹ ಕೇಂದ್ರಗಳಲ್ಲಿ ಅಸಹನೆ, ಅಪನಂಬಿಕೆಯನ್ನು ಹುಟ್ಟುಹಾಕುವ ಕೆಲಸವನ್ನು ಯಾರೊಬ್ಬರೂ ಮಾಡುವುದು ಸರಿಯಲ್ಲ ಎಂಬ ನಿರ್ಣಯವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸುವ ಸಾಧ್ಯತೆ ಇದೆ.

ಬೆಳಗಾವಿ ಅಧಿವೇಶನದ ವೇಳೆ ಮರಾಠಿ–ಕನ್ನಡ ಭಾಷಿಕರ ಮಧ್ಯೆ ವಿವಾದ ಎದ್ದು, ಕೆಲವು ಕಡೆಗಳಲ್ಲಿ ಘರ್ಷಣೆಯೂ ನಡೆದಿತ್ತು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿಪಾದಿಸಿತ್ತು. ಈ ವೇಳೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮುಂದೆ ನಿಂತು ಕನ್ನಡ ಪರ ಹಾಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ; ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸುವ ನಿರ್ಣಯವನ್ನು ಮಂಡಿಸಿದ್ದರು. ಕಾಂಗ್ರೆಸ್, ಜೆಡಿಎಸ್ ಸದಸ್ಯರು ಇದನ್ನು ಒಕ್ಕೊರಲಿನಿಂದ ಬೆಂಬಲಿಸಿದ್ದರು. ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಕಿತ್ತೂರು ರಾಣಿಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪಿಸುವುದಾಗಿ ಬೊಮ್ಮಾಯಿ ಘೋಷಿಸಿದ್ದರು.

‘ಹಿಜಾಬ್–ಕೇಸರಿ ಶಾಲು ವಿವಾದವು ನಾಡಿನುದ್ದಕ್ಕೂ ವ್ಯಾಪಿಸಿ, ನಾಡನ್ನು ತಲ್ಲಣಗೊಳಿಸಿದೆ. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಸ್ಪಷ್ಟ ನಿಲುವು ತೆಗೆದುಕೊಂಡು ನಾಡಿನ ಸೌಹಾರ್ದ ಪರಂಪರೆ ಹಾಗೂ ತಲೆಮಾರುಗಳಿಂದ ಉಳಿದುಬಂದಿರುವ ಸಹಬಾಳ್ವೆಯನ್ನು ಕಾಪಾಡುವತ್ತ ಹೆಜ್ಜೆ ಇಡಲು ಸರ್ಕಾರ ಆಲೋಚಿಸಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರ ಜತೆಯೂ ಮೊದಲ ಹಂತದ ಚರ್ಚೆ ನಡೆದಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.