ADVERTISEMENT

‘ಅಪ್ಪ’ನ ಜಾತ್ರೆ: ಬಳೆ, ಕುಂಕುಮ ಮಾರುವ ಮುಸ್ಲಿಮರು: ಸಾಮರಸ್ಯದ ಜಾತ್ರೆ

ಕಿರಣ ನಾಯ್ಕನೂರ
Published 23 ಮಾರ್ಚ್ 2022, 19:46 IST
Last Updated 23 ಮಾರ್ಚ್ 2022, 19:46 IST
ಕಲಬುರಗಿಯ ಶರಣಬಸವೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಮಹಿಳೆಯರಿಗೆ ಬಳೆಗಳಗಳನ್ನು ತೋಡಿಸುತ್ತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಶರಣಬಸವೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಮಹಿಳೆಯರಿಗೆ ಬಳೆಗಳಗಳನ್ನು ತೋಡಿಸುತ್ತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌   

ಕಲಬುರಗಿ: ಇಲ್ಲಿ ನಡೆಯುತ್ತಿರುವ ಶರಣಬಸವೇಶ್ವರರ ಜಾತ್ರೆ ಭಾವೈಕ್ಯತೆಯ ಸಂದೇಶ ಸಾರುತ್ತಿದೆ.

ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಶರಣಬಸವೇಶ್ವರರಿಗೆ ಅಪಾರ ಭಕ್ತರಿದ್ದಾರೆ. ಅಮಾವಾಸ್ಯೆ, ಶ್ರಾವಣ ಸೋಮವಾರ, ಜಾತ್ರೆಯ ದಿನ ಅನೇಕ ಮುಸ್ಲಿಮರು ದೇವಸ್ಥಾನಕ್ಕೆ ಆಗಮಿಸಿ ಸರತಿಯಲ್ಲಿ ನಿಂತು ಶರಣಬಸವೇಶ್ವರರ ದರ್ಶನ ಪಡೆಯುತ್ತಾರೆ.

ಈಗ ರಾಜ್ಯದ ಕೆಲ ಧಾರ್ಮಿಕ ಸ್ಥಳಗಳಲ್ಲಿ ‘ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ’ ಎನ್ನುವ ಕೂಗಿಗೇ ಅಪವಾದ ಎನ್ನುವಂತೆ ಅದೆಷ್ಟೋ ಮುಸ್ಲಿಂ ವ್ಯಾಪಾರಸ್ಥರು ಇಲ್ಲಿಯ ಜಾತ್ರೆಯಲ್ಲಿ ಅಂಗಡಿ ಇಟ್ಟು ನೆಮ್ಮದಿಯಿಂದ ವಹಿವಾಟು ನಡೆಸುತ್ತಿದ್ದಾರೆ.

ADVERTISEMENT

ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ವಿವಿಧ ಬಗೆಯ ತಿನಿಸು, ಆಟ, ಆಲಂಕಾರಿಕ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಬಳೆ, ಕುಂಕುಮಗಳನ್ನು ಮಸ್ಲಿಂ ಸಮುದಾಯದವರೇ ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ.

ಒಂದೇ ಕಡೆ ಸುಮಾರು 20 ಅಂಗಡಿಗಳಿದ್ದು, ಹಿಂದೂ ಮಹಿಳೆಯರು ತಮಗೆ ಬೇಕಾದ ಬಣ್ಣ ಬಣ್ಣದ ಬಳೆ ಆರಿಸಿಕೊಂಡು ಮುಸ್ಲಿಂ ಮಹಿಳೆಯರಿಂದಲೇ ತೊಡಿಸಿಕೊಳ್ಳುತ್ತಿದ್ದಾರೆ. ಮುಸ್ಲಿಂ ವೃದ್ಧರೊಬ್ಬರು ಕುಂಕುಮ, ವಿಭೂತಿ, ರುದ್ರಾಕ್ಷಿ ಮಾರಾಟ ಮಾಡುತ್ತಿರುವುದು ವಿಶೇಷ.

ಫಕೀರರೊಬ್ಬರು ಶರಣಬಸವೇಶ್ವರರ ಭವ್ಯ ರಥದ ಮುಂದೆ ನಿಂತು ಜನರಿಗೆ ನವಿಲು ಗರಿಯಿಂದ ಆಶೀರ್ವಾದ ಮಾಡುವುದು, ಜನರು ಭಕ್ತಿಯಿಂದ ಕಾಣಿಕೆ ನೀಡುವುದು, ಮುಸ್ಲಿಂ ಸಮುದಾಯದವರು ಮಹಾದಾಸೋಹದಲ್ಲಿ ಪ್ರಸಾದ ಸ್ವೀಕರಿಸುವುದು ಜಾತ್ರೆಯಲ್ಲಿ ಗಮನ ಸೆಳೆಯುತ್ತಿದೆ.

*
ಬಸವ ಜಯಂತಿ ಮುನ್ನ ನನ್ನ ಮೊಮ್ಮಗಳ ಮದುವೆ ಇದೆ. ಜಾತ್ರೆಯಲ್ಲಿ ಬಳೆ ಇಡಿಸಿದರೆ ಶುಭ ಎಂದು ಬಳೆ ತೊಡಿಸಿದ್ದೇನೆ.
–ಸಿದ್ದಮ್ಮ, ಸೊಲ್ಲಾಪುರ,

*
ಮುಸ್ಲಿಂ ವ್ಯಾಪಾರಸ್ಥರಿಗೆ ಅನುಮತಿ ಕೊಡಬೇಡಿ ಎಂದು ನಮಗೆ ಯಾವುದೇ ಮನವಿ ಬಂದಿಲ್ಲ. ಪ್ರತಿ ವರ್ಷದಂತೆ ಎಲ್ಲರಿಗೂ ಅನುಮತಿ ನೀಡಿದ್ದೇವೆ.
–ಬಸವರಾಜ ದೇಶಮುಖ,ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.