ADVERTISEMENT

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಲು ಹಿರೇಮಠ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 12:13 IST
Last Updated 13 ಜೂನ್ 2020, 12:13 IST
ಎಸ್‌.ಆರ್‌.ಹಿರೇಮಠ
ಎಸ್‌.ಆರ್‌.ಹಿರೇಮಠ   

ಧಾರವಾಡ: ‘ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತ ವರ್ಗಕ್ಕೆ ಮರಣ ಶಾಸನವಾಗಿದೆ. ತಕ್ಷಣವೇ ಈ ಕಾಯ್ದೆಯನ್ನು ಸರ್ಕಾರ ಕೈಬಿಡಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಆಗ್ರಹಿಸಿದರು.

‘ಬಡ ರೈತರ ರಕ್ಷಣೆ ಮತ್ತು ಕೃಷಿ ಸಂಕಟ ವಿಕೋಪಕ್ಕೆ ಹೋಗದಂತೆ ಸರ್ಕಾರ ತನ್ನ ಹೊಣೆಗಾರಿಕೆ ನಿಭಾಯಿಸಬೇಕು. ತಾವು ರೈತ ಪರ ಎಂದು ಹಸಿರು ಶಾಲು ಹಾಕಿಕೊಳ್ಳುವ ಮುಖ್ಯಮಂತ್ರಿ, ಸಚಿವರಾದ ಆರ್. ಅಶೋಕ ಮತ್ತು ಜೆ.ಸಿ. ಮಾಧುಸ್ವಾಮಿ ಅವರಂತ ಪಟ್ಟಭದ್ರರನ್ನು ನಿಯಂತ್ರಿಸಬೇಕು. ಸರ್ಕಾರ ಒಂದು ವೇಳೆ ಕಾಯ್ದೆ ತಿದ್ದುಪಡಿ ಕೈ ಬಿಡದಿದ್ದಲ್ಲಿ ರೈತ ವಿರೋಧಿ ಮತ್ತು ಭೂ ಮಾಫಿಯಾ ವಿರುದ್ಧ ಪಕ್ಷಾತೀತವಾಗಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ರೈತ ವಿರೋಧಿ ಹಾಗೂ ಪ್ರತಿಗಾಮಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ಕಲಂ 79 (ಎ), (ಬಿ), (ಸಿ), 80 ಅನ್ನು ಪೂರ್ವಾನ್ವಯ ಆಗುವಂತೆ ರದ್ದುಪಡಿಸುವುದು ಮತ್ತು ಪ್ರಸ್ತುತ ಬಾಕಿ ಉಳಿದಿರುವ 79 ಎ ಮತ್ತು 79 ಬಿ ಪ್ರಕರರಣಗಳನ್ನು ವಜಾ ಮಾಡುವ ಬಗ್ಗೆ ಕಲಂ 63 ರಲ್ಲಿ ನಿಗದಿಡಪಸಿರುವ ಖರೀದಿ ಮಿತಿಯನ್ನು ದ್ವಿಗುಣಗೊಳಿಸುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದನ್ನು ಸರ್ಕಾರ ಕೈ ಬಿಡಬೇಕು’ ಎಂದರು.

ADVERTISEMENT

‘ತಮ್ಮ ಜೀವನದ ಇಳಿ ವಯಸ್ಸಿನಲ್ಲಿರುವ ಯಡಿಯೂರಪ್ಪನವರು ರೈತರ ವಿರೋಧಿ ಆಗಲು ಹೋಗಬಾರದು. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ಎಸ್‌.ಆರ್‌. ಹಿರೇಮಠ ಎಚ್ಚರಿಸಿದರು.

‘ವಲಸೆ ಕಾರ್ಮಿಕರ ಕುರಿತು ಮುಂಜಾಗ್ರತೆ ಕ್ರಮಗಳನ್ನು ಕೈಕೊಳ್ಳದೇ ಲಾಕ್‌ಡೌನ್ ಮಾಡಿರುವುದು ಸರ್ಕಾರಗಳ ವೈಫಲ್ಯವಾಗಿದೆ. ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರಿಂ ಕೋರ್ಟ್ ನೀಡಿರುವ ಆದೇಶವನ್ನು ಸಿಟಿಜನ್ ಫಾರ್ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ ಮತ್ತು ಜನಸಂಗ್ರಾಮ ಪರಿಷತ್ ಸ್ವಾಗತಿಸುತ್ತವೆ. ಸರ್ಕಾರಗಳ ಮತ್ತು ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಅರಿತು ನ್ಯಾಯಾಲಯ ಕಣ್ಣು ತೆರೆಸಿದಂತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.