ADVERTISEMENT

‍ಪ್ರಯಾಣಿಕರ ಗಮನಕ್ಕೆ: ಹೋಳಿ ಹಬ್ಬದ ಪ್ರಯುಕ್ತ ಈ ನಗರಗಳಿಗೆ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 10:50 IST
Last Updated 19 ಫೆಬ್ರುವರಿ 2026, 10:50 IST
ರೈಲು (ಸಾಂಧರ್ಬಿಕ ಚಿತ್ರ)
ರೈಲು (ಸಾಂಧರ್ಬಿಕ ಚಿತ್ರ)   

ಮಾರ್ಚ್ ತಿಂಗಳಿನಲ್ಲಿ ಹೋಳಿಹಬ್ಬ ಬರಲಿದೆ. ಬೆಂಗಳೂರಿನಿಂದ ನಾನಾ ಊರುಗಳಿಗೆ ಪ್ರಯಾಣ ಮಾಡುವವರಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿ ನೀಡಿದೆ. ಹಬ್ಬದ ಹಿನ್ನೆಲೆ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ಹೆಚ್ಚುವರಿ ರೈಲ್ವೆ ಸೇವೆ ಕಲ್ಪಿಸಿದೆ.

ಮುಖ್ಯವಾಗಿ ಬೆಂಗಳೂರಿನಿಂದ ಬೀದರ್‌ಗೆ ಹಾಗೂ ಬೆಂಗಳೂರು ಕಂಟೋನ್ಮೆಂಟ್‌ನಿಂದ ಕಲಬುರಗಿ ನಡುವೆ ವಿಶೇಷ ರೈಲುಗಳ ಸಂಚಾರವನ್ನು ವಿಸ್ತರಿಸಲಾಗಿದೆ.

ಬೆಂಗಳೂರಿನಿಂದ ಪ್ರತಿ ಶುಕ್ರವಾರ ಮತ್ತು ಭಾನುವಾರ ಹೊರಡುವ ಎಸ್ಎಂವಿಟಿ ಬೆಂಗಳೂರು–ಬೀದರ್ ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಈ ಮೊದಲು ಫೆಬ್ರುವರಿ 27ರವರೆಗೆ ಸಂಚರಿಸಲು ಮಾತ್ರ ನಿಗದಿಯಾಗಿತ್ತು. ಇದೀಗ ಇದರ ಸೇವೆಯನ್ನು ಮಾರ್ಚ್ 1ರಿಂದ ಮಾರ್ಚ್ 29ರವರೆಗೆ ವಿಸ್ತರಿಸಲಾಗಿದೆ.

ADVERTISEMENT

ಬೀದರ್ ನಿಲ್ದಾಣದಿಂದ ಪ್ರತಿ ಶನಿವಾರ ಮತ್ತು ಸೋಮವಾರ ಹೊರಡುವ ಬೀದರ್–ಎಸ್ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಫೆಬ್ರುವರಿ 28ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಇದೀಗ ಇದರ ಸಂಚಾರವನ್ನು ಮಾರ್ಚ್ 2ರಿಂದ ಮಾರ್ಚ್ 30ರವರೆಗೆ ವಿಸ್ತರಿಸಲಾಗಿದೆ. ವಿಸ್ತೃತ ಅವಧಿಯಲ್ಲಿ ಎರಡೂ ಕಡೆಯಿಂದ ತಲಾ 9 ಟ್ರಿಪ್ ಸಂಚರಿಸಲಿದೆ.

ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣದಿಂದ ಪ್ರತಿ ಶನಿವಾರ ಹೊರಡುವ ಬೆಂಗಳೂರು ಕಂಟೋನ್ಮೆಂಟ್ – ಕಲಬುರಗಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಈ ಮೊದಲು ಫೆಬ್ರವರಿ 28ರವರೆಗೆ ಮಾತ್ರ ಸಂಚರಿಸಲು ನಿಗದಿಯಾಗಿತ್ತು. ಈ ರೈಲಿನ ಸೇವೆಯನ್ನು ಮಾರ್ಚ್ 7ರಿಂದ ಮಾರ್ಚ್ 28ರವರೆಗೆ ವಿಸ್ತರಿಸಲಾಗಿದೆ.

ಕಲಬುರಗಿಯಿಂದ ಪ್ರತಿ ಭಾನುವಾರ ಹೊರಡುವ ಕಲಬುರಗಿ – ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಈ ಮೊದಲು ಮಾರ್ಚ್ 1ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಇದೀಗ ರೈಲಿನ ಸೇವೆಯನ್ನು ಮಾರ್ಚ್ 8ರಿಂದ ಮಾರ್ಚ್ 29ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ರೈಲು ಎರಡೂ ಕಡೆಯಿಂದ ತಲಾ 4 ಟ್ರಿಪ್‌ ಸಂಚರಿಸಲಿದೆ.

ಸಾಂತ್ರಾಗಾಚಿ - ಯಲಹಂಕ ವಿಶೇಷ ರೈಲು ವಿಸ್ತರಣೆ

ಹೋಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ಅನುಕೂಲಕ್ಕಾಗಿ ಆಗ್ನೇಯ ರೈಲ್ವೆಯು ಸಾಂತ್ರಾಗಾಚಿ ಮತ್ತು ಯಲಹಂಕ ನಡುವಿನ ವಿಶೇಷ ರೈಲು ಸೇವೆಯನ್ನು ಸಹ ವಿಸ್ತರಿಸಿದೆ.

ಸಾಂತ್ರಾಗಾಚಿಯಿಂದ ಪ್ರತಿ ಗುರುವಾರ ಹೊರಡುವ ಸಾಂತ್ರಾಗಾಚಿ–ಯಲಹಂಕ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಈ ಮೊದಲು ಫೆಬ್ರುವರಿ 26ರವರೆಗೆ ಸಂಚರಿಸಲು ನಿಗದಿಯಾಗಿತ್ತು. ಈಗ ಇದನ್ನು ಮಾರ್ಚ್ 5ರಿಂದ ಮಾರ್ಚ್ 26ರವರೆಗೆ ವಿಸ್ತರಿಸಲಾಗಿದೆ.

ಯಲಹಂಕದಿಂದ ಪ್ರತಿ ಶನಿವಾರ ಹೊರಡುವ ಯಲಹಂಕ–ಸಾಂತ್ರಾಗಾಚಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಈ ಮೊದಲು ಫೆಬ್ರುವರಿ 28ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಈಗ ಇದನ್ನು ಮಾರ್ಚ್ 7 ರಿಂದ ಮಾರ್ಚ್ 28ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ರೈಲು ಎರಡೂ ಕಡೆಯಿಂದ 4 ಟ್ರಿಪ್‌ ಸಂಚರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.