ADVERTISEMENT

ಮೀಸಲಾತಿ ಶೇ 50ಕ್ಕಿಂತ ಹೆಚ್ಚಿಸಬೇಕೇ? ಕಾನೂನು ತಜ್ಞರ ಜೊತೆ ಬೊಮ್ಮಾಯಿ ಸಭೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 20:50 IST
Last Updated 13 ಮಾರ್ಚ್ 2021, 20:50 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಮೀಸಲಾತಿ ಪ್ರಮಾಣ ಶೇ 50ಕ್ಕಿಂತ ಹೆಚ್ಚಿಸಬೇಕೊ, ಬೇಡವೊ ಎಂಬ ವಿಚಾರದಲ್ಲಿ ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯದವರ ಆಶೋತ್ತರ ಮತ್ತು ಸಂವಿಧಾನದ ಹಕ್ಕುಗಳನ್ನು ಗಮನದಲ್ಲಿಟ್ಟು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ಎಲ್ಲ ರಾಜ್ಯಗಳಿಂದ ಸುಪ್ರೀಂಕೋರ್ಟ್ ಅಭಿಪ್ರಾಯ ಕೇಳಿರುವ ಬೆನ್ನಲ್ಲೇ, ಬೊಮ್ಮಾಯಿ ಅವರು ಕಾನೂನು ತಜ್ಞರ ಜೊತೆ ಶನಿವಾರ ಸುದೀರ್ಘ ಸಭೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಎಲ್ಲ ವರ್ಗಗಳ ಜನಸಂಖ್ಯೆ, ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದ ಬಯಕೆಗಳಿಗೆ ಪೂರಕವಾಗಿ ಎಲ್ಲಾ ಆಯಾಮಗಳಲ್ಲೂ ಚರ್ಚೆ ಮಾಡಿದ್ದೇವೆ’ ಎಂದರು.

ADVERTISEMENT

‘ಸಭೆಯಲ್ಲಿ ಕೆಲವರು ಲಿಖಿತ ಅಭಿಪ್ರಾಯ ನೀಡಿದ್ದಾರೆ. ಇದೇ 23ರಂದು ಸುಪ್ರೀಂ ಕೋರ್ಟ್‌ಗೆ ರಾಜ್ಯದ ನಿಲುವು ತಿಳಿಸಬೇಕಿದೆ. ಹೀಗಾಗಿ, ಉತ್ತರದ ಕರಡನ್ನು ಕಾನೂನು ತಜ್ಞರಿಗೆ ಕಳುಹಿಸಿ, ಅವರ ಸ್ಪಷ್ಟನೆ ಪಡೆದು ಅಂತಿಮಗೊಳಿಸಲಾಗುವುದು’ ಎಂದರು.

‘ಮೀಸಲಾತಿ ವಿಚಾರದಲ್ಲಿ ಕೆಲವು ತಿದ್ದುಪಡಿಯಿಂದ ರಾಜ್ಯ ಸರ್ಕಾರಕ್ಕೆ ಈಗಿರುವ ಅವಕಾಶಗಳಿಗೆ ತೊಂದರೆ ಆಗಬಹುದೇ? ಈಗಿರುವ ಅವಕಾಶಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಹೇಗೆ ರಕ್ಷಣೆ ಮಾಡಬೇಕು ಎಂಬ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಿಶ್ರಾಂತ ನ್ಯಾಯಮೂರ್ತಿ ಮಂಜುನಾಥ್‌, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಹಿಂದಿನ ಅಡ್ವೊಕೇಟ್‌ ಜನರಲ್‌ಗಳಾದ ರವಿವರ್ಮ ಕುಮಾರ್‌, ಉದಯ ಹೊಳ್ಳ, ಮಧುಸೂದನ್‌ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.