ADVERTISEMENT

Honey Trap | ಸಚಿವ ರಾಜಣ್ಣಗೆ ‘ಮಧುಬಲೆ’: ರಾಜಕೀಯ ಕಂಪನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 23:30 IST
Last Updated 20 ಮಾರ್ಚ್ 2025, 23:30 IST
ಕೆ.ಎನ್‌. ರಾಜಣ್ಣ
ಕೆ.ಎನ್‌. ರಾಜಣ್ಣ   

ಬೆಂಗಳೂರು: ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರನ್ನು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಬೀಳಿಸಲು ಯತ್ನಿಸಿದ ಪ್ರಕರಣ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿತು. ಈ ವಿಷಯವು ಆಡಳಿತ ಪ‍ಕ್ಷದಲ್ಲಿ ಕಂಪನವನ್ನೇ ಎಬ್ಬಿಸಿದೆ.

ಸದನದಲ್ಲಿ ಇದನ್ನು ದೃಢಪಡಿಸಿದ ರಾಜಣ್ಣ, ‘ನನ್ನ ಮೇಲೆ ಹನಿಟ್ರ್ಯಾಪ್ ಯತ್ನದ ಪುರಾವೆ ಇಟ್ಟುಕೊಂಡಿದ್ದೇನೆ. ಗೃಹ ಸಚಿವರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ’ ಎಂದರು. 

ಆಗ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ, ‘ರಾಜಣ್ಣ ಮನವಿ ಕೊಟ್ಟರೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡುತ್ತೇನೆ. ಸತ್ಯಾಸತ್ಯತೆ ತಿಳಿದುಕೊಳ್ಳಬೇಕಿದೆ’ ಎಂದರು. ‘ನಮ್ಮ ಸದನಕ್ಕೆ ದೇಶದಲ್ಲಿ ಅತ್ಯುನ್ನತ ಗೌರವವಿದೆ. ಸದನ ಹಾಗೂ ಸದಸ್ಯರ ಘನತೆ ಕಾಪಾಡಲು, ಇಂತಹ ಘಟನೆಗಳಿಗೆ ಇತಿಶ್ರೀ ಹಾಡಬೇಕಿದೆ. ಇದೊಂದು ಗಂಭೀರ ವಿಚಾರ’ ಎಂದೂ ಹೇಳಿದರು.

ADVERTISEMENT

ಮಧುಬಲೆಯ ವಿಚಾರ ಪ್ರಸ್ತಾಪಿಸಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ’ ಎಂದರು.

ಬಜೆಟ್ ಮೇಲಿನ ಚರ್ಚೆ ವೇಳೆ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ. ಜನಪ್ರತಿನಿಧಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ. ಇದು ಕೆಟ್ಟ ಸಂಸ್ಕೃತಿ’ ಎಂದರು.

‘ರಾಜಕೀಯ ಪಕ್ಷದಲ್ಲಿ ಇರುವವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯಕ್ಕಾಗಿಯೋ, ಮುಖ್ಯಮಂತ್ರಿ ಆಗಬೇಕೆಂಬ ಕಾರಣಕ್ಕೊ ಹೀಗೆಲ್ಲ ಮಾಡುವುದು ಸರಿಯಲ್ಲ’ ಎಂದರು.

ಹನಿಟ್ರ್ಯಾಪ್ ವಿಷಯವಾಗಿ ಮಾಧ್ಯಮದ ಎದುರು ಮಾತನಾಡುವುದಲ್ಲ. ಅದರ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಿ. ಅದರ ಬಗ್ಗೆ ತನಿಖೆ ಮಾಡಿಸುತ್ತೇವೆ
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ತನಿಖೆಯ ಭರವಸೆ ನೀಡಿದ ಸಿ.ಎಂ
ತಮ್ಮನ್ನು ಮಧುಬಲೆಗೆ ಕೆಡವುವ ಯತ್ನ ನಡೆದಿರುವ ಬಗ್ಗೆ ವಿಧಾನಸಭೆ ಯಲ್ಲಿ ಮಾತನಾಡಿದ ಬೆನ್ನಲ್ಲೆ ಕೆ.ಎನ್‌. ರಾಜಣ್ಣ ಅವರು ತಮ್ಮ ಮಗ, ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.
‘ಹನಿಟ್ರ್ಯಾಪ್ ಹಿಂದೆ ಡಿ.ಕೆ ತಂಡ’
‘ಡಿ.ಕೆ. ಶಿವಕುಮಾರ್ ಅವರ ಹನಿಟ್ರ್ಯಾಪ್‌ ತಂಡ ಈ ಕೆಲಸ ಮಾಡಿದೆ. ಸಿಬಿಐ ತನಿಖೆಗೆ ಕೊಡುವಂತೆ ನಾನು ಮನವಿ ಮಾಡಿದ್ದೇನೆ’ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ, ಎಚ್‌.ಡಿ. ರೇವಣ್ಣ‌ ಅವರನ್ನು ಹನಿಟ್ರ್ಯಾಪ್‌ ಮಾಡಿದ್ದರು. ಈಗ ರಾಜಣ್ಣ ಮೇಲೆ ಮಾಡಿದ್ದಾರೆ’ ಎಂದರು.

‘ನನಗೊಬ್ಬನಿಗೇ ಅಲ್ಲ 48 ಮಂದಿಗೆ ಹನಿಟ್ರ್ಯಾಪ್’

‘ನಾನೊಬ್ಬನೇ ಅಲ್ಲ. ರಾಜ್ಯ ಹಾಗೂ ಕೇಂದ್ರದ ಎಲ್ಲ ಪಕ್ಷಗಳ ನಾಯಕರು, ಜಡ್ಜ್‌ಗಳು ಸೇರಿದಂತೆ 48 ಮಂದಿ ಮೇಲೆ ಹನಿಟ್ರ್ಯಾಪ್ ನಡೆಸಿ ಸಿ.ಡಿ ಮಾಡಲಾಗಿದೆ’ ಎಂದು ಕೆ.ಎನ್. ರಾಜಣ್ಣ ಹೇಳಿದರು.

ವಿಧಾನಸಭೆಯಲ್ಲಿ ಯತ್ನಾಳ ಅವರು ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ರಾಜಣ್ಣ, ‘ರಾಜ್ಯವು ಸಿ.ಡಿ, ಪೆನ್‌ಡ್ರೈವ್ ಕಾರ್ಖಾನೆ ಎಂದು ಬಹಳ ಜನ ಹೇಳುತ್ತಿದ್ದಾರೆ. ಇದು ಗುರುತರವಾದ ಆರೋಪ. ಹನಿಟ್ರ್ಯಾಪ್ ಯತ್ನದಲ್ಲಿ ತುಮಕೂರಿನ ಇಬ್ಬರು ಸಚಿವರ ಹೆಸರು ಕೇಳಿಬರುತ್ತಿದೆ.‌ ತುಮಕೂರಿನ ಪ್ರಭಾವಿ ಸಚಿವರೆಂದರೆ, ನಾನೊಬ್ಬ ಮತ್ತು ಗೃಹ ಸಚಿವ ಜಿ. ಪರಮೇಶ್ವರ’ ಎಂದರು.

‘ಅನೇಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡುತ್ತೇನೆ. ಇದನ್ನು ತನಿಖೆ ಮಾಡಬೇಕು. ಇದರ ನಿರ್ಮಾಪಕರು, ನಿರ್ದೇಶಕರು ಯಾರು ಎಲ್ಲ ಹೊರಗಡೆ ಬರಲಿ. ಹನಿಟ್ರ್ಯಾಪ್ ಪ್ರಕರಣ ಬಹಿರಂಗ ಆಗಲಿ. ಇದೊಂದು ಪಿಡುಗು’ ಎಂದೂ ಹೇಳಿದರು.

‘ಮೊದಲ ವಿಕೆಟ್‌ ಬೀಳಿಸಲು ಪ್ರಯತ್ನ’

‘ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರ್ಯಾಪ್‌ಗೆ ಯತ್ನ ನಡೆದಿದೆ. ಮೊದಲ ವಿಕೆಟ್‌ ಬೀಳಿಸಲು ಪ್ರಯತ್ನ ಆಗಿದೆ. ಇಂತಹ ಯತ್ನಕ್ಕೆ ಕಡಿವಾಣ ಹಾಕಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಸಚಿವರ ಕಚೇರಿಯಲ್ಲಿ, ಮನೆಯಲ್ಲಿ, ಕ್ಷೇತ್ರದಲ್ಲಿ ಹನಿಟ್ರ್ಯಾಪ್‌ಗೆ ಪ್ರಯತ್ನ ನಡೆದಿದೆ. ಆ ಪ್ರಯತ್ನ ವಿಫಲವಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ಆಗಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಕೃತ್ಯ ನಡೆದಿಲ್ಲ.  ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರೊಬ್ಬರ ವಿರುದ್ಧ ಇಂತಹ ಯತ್ನ ನಡೆದಿತ್ತು. ಕಳೆದ 20 ವರ್ಷಗಳಿಂದ ಈ ಹನಿ ಟ್ರ್ಯಾಪ್ ದಂಧೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷಗಳೂ ಇದಕ್ಕೆ ಬಲಿ ಆಗಿವೆ’ ಎಂದರು.

‘ನ್ಯಾಯಾಧೀಶರಿಂದ ತನಿಖೆ ಮಾಡಿಸಿ’
‘ಹನಿಟ್ರ್ಯಾಪ್ ಗಂಭೀರ ವಿಚಾರ. ಬೇರೆಲ್ಲ ಪ್ರಕರಣಗಳಿಗೂ ಎಸ್ಐಟಿ ಮಾಡುತ್ತೀರಾ. ಈ ಪ್ರಕರಣ ಬಗ್ಗೆ ನೇರವಾಗಿ ಮಂತ್ರಿಗಳೇ ಹೇಳಿದ್ದಾರೆ. ಅವರಿಂದ ದೂರು ಪಡೆದು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರಿಂದ ಎಲ್ಲರಿಗೂ ನ್ಯಾಯ ಸಿಗಲಿದೆ’ ಎಂದು ವಿರೋಧ ಪಕ್ಷದ ನಾಯಕ ಅಶೋಕ ಆಗ್ರಹಿಸಿದರು. ‘ಸದನದಲ್ಲಿ ಮಂತ್ರಿಯೊಬ್ಬರು ಹನಿಟ್ರ್ಯಾಪ್ ಬಗ್ಗೆ ಮಾತನಾಡುತ್ತಾರೆಂದರೆ ನಾವು, ನೀವು ಗಂಭೀರವಾಗಿ ತೆಗೆದುಕೊಳ್ಳಬೇಕು. ಎಸ್ಐಟಿ ಮಾಡುತ್ತಿರೊ, ಯಾವ ತನಿಖೆ, ಯಾರ ನೇತೃತ್ವದಲ್ಲಿ ಮಾಡುತ್ತೀರೆಂದು ಸದನದಲ್ಲೇ ತಿಳಿಸಿ’ ಎಂದು ಗೃಹ ಸಚಿವರನ್ನು ಒತ್ತಾಯಿಸಿದರು.

‘ಹನಿಟ್ರ್ಯಾಪ್ ಮೂಲಕ ಕಟ್ಟಿ ಹಾಕಿದರೆ ಹೇಗೆ?’

‘ಯಾವುದೇ ಕಾರಣಕ್ಕೂ ಈ ರೀತಿಯ ಘಟನೆ ಆಗಬಾರದು. ವಿರೋಧ, ವೈಷಮ್ಯ ಸಿದ್ಧಾಂತದ ಆಧಾರದ ಮೇಲೆ ನಡೆಯಲಿ. ಯೋಜನೆಗಳ ಮೂಲಕ ನಡೆಯಲಿ, ಕಾರ್ಯಕ್ರಮಗಳ ಮೂಲಕ ವಿರೋಧ ಮಾಡಲಿ. ಅದು ಬಿಟ್ಟು ಹನಿಟ್ರ್ಯಾಪ್ ಮೂಲಕ ಕಟ್ಟಿ ಹಾಕುವ ಪ್ರಯತ್ನ ಮಾಡಿದರೆ ಹೇಗೆ’ ಎಂದು ಬಿಜೆಪಿಯ ವಿ. ಸುನಿಲ್ ಕುಮಾರ್ ಪ್ರಶ್ನಿಸಿದರು.

‘ಸರ್ಕಾರವೇ ಹನಿಟ್ರ್ಯಾಪ್‌ಗೆ ಬೆಂಬಲವಾಗಿ ನಿಂತಿದೆಯೇ? ಯಾರು ಆ ಪ್ರಭಾವಿ ಮಂತ್ರಿ? ನಿಮ್ಮ‌ ಪಕ್ಷದಲ್ಲಿ ಯಾರ ಯಾರ ಮೇಲೆ ಹನಿಟ್ರ್ಯಾಪ್ ಆಗಿದೆ. ನಮ್ಮ ಪಕ್ಷದಲ್ಲಿ ಯಾರ ಯಾರ ಮೇಲೆ ಆಗಿದೆ ಎಂದು ಗೊತ್ತಾಗಲಿ. ರಾಜಕಾರಣಕ್ಕೆ ಏನು ಬೇಕಾದರೂ ಮಾಡುತ್ತಾರೆಂದರೆ ಸಹಿಸಲು ಆಗಲ್ಲ. ನಾಳೆ ಎಲ್ಲರ ಮೇಲೂ ಇದು ಬರಬಹುದು. ಇದು ರಾಜಕಾರಣದ ಪ್ರಶ್ನೆ ಅಲ್ಲ, ಗೌರವದ ಪ್ರಶ್ನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.