ADVERTISEMENT

ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ–ಪುಟ್ಟ ಗೊಂದಲಗಳಿವೆ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 9:59 IST
Last Updated 6 ಮಾರ್ಚ್ 2019, 9:59 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಸಿರಿಗೆರೆ: ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ–ಪುಟ್ಟ ಗೊಂದಲಗಳು ಇರುವುದು ನಿಜ. ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಾಗ ಅಸಮಾಧಾನಗಳು ಉದ್ಭವಿಸುವುದು ಸಹಜ. ಸಮನ್ವಯ ಸಮಿತಿ ಈ ಗೊಂದಲಗಳಿಗೆ ತೆರೆ ಎಳೆಯಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತರಳಬಾಳು ಮಠಕ್ಕೆ ಬುಧವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷವೊಂದು ಸ್ವಸಾಮರ್ಥ್ಯದಿಂದ ಅಧಿಕಾರಕ್ಕೆ ಬಂದಾಗಲೂ ಇಂತಹ ಸಮಸ್ಯೆಗಳು ಇರುತ್ತವೆ. ರಾಜ್ಯದಲ್ಲಿ ಜಾತ್ಯತೀತ ಪಕ್ಷಗಳು ಅಧಿಕಾರದಲ್ಲಿವೆ ಎಂಬುದೇ ಸಮಾಧಾನಕರ ಸಂಗತಿ’ ಎಂದರು.

‘ಸಮ್ಮಿಶ್ರ ಸರ್ಕಾರ ಉರುಳುತ್ತದೆ ಎಂದು ಬಿಜೆಪಿ ಕಾಯುತ್ತಿದೆ. ಸಂಕ್ರಾಂತಿ, ಅಧಿವೇಶನ, ಹುಣ್ಣಿಮೆ, ಅಮವಾಸ್ಯೆ ಗಡುವು ಮುಕ್ತಾಯವಾಗಿವೆ. ಲೋಕಸಭಾ ಚುನಾವಣೆಯ ಬಳಿಕ ಸರ್ಕಾರ ಕೆಡವುತ್ತೇವೆ ಎಂಬ ಹೊಸ ವರಸೆ ಶುರುವಾಗಿದೆ. ಉಮೇಶ ಜಾಧವ ಹೊರತುಪಡಿಸಿ ಯಾವೊಬ್ಬ ಶಾಸಕರೂ ಕಾಂಗ್ರೆಸ್‌ ಪಕ್ಷವನ್ನು ತೊರೆಯುವುದಿಲ್ಲ. ಸರ್ಕಾರ ಕೂಡ ಬೀಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಸಂಸದರು ಹಾಗೂ ಅತಿ ಹೆಚ್ಚು ಶಾಸಕರನ್ನು ಜೆಡಿಎಸ್‌ ಹೊಂದಿದೆ. ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಪಕ್ಷ ತೀರ್ಮಾನಿಸಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಯ ಅಗತ್ಯ ಬೀಳುವುದಿಲ್ಲ. ಕಾಂಗ್ರೆಸ್‌ಗೆ ಅವಕಾಶ ಸಿಕ್ಕರೆ ಖಂಡಿತ ಸುಮಲತಾ ಅವರಿಗೆ ನೀಡುತ್ತಿದ್ದೆವು’ ಎಂದು ಹೇಳಿದರು.

‘ಲಿಂಗಾಯತ ಧರ್ಮ ನನ್ನ ಅಸ್ಮಿತೆ. ಕಾನೂನು ಹೋರಾಟ ಮಾತ್ರ ನಮ್ಮ ಮುಂದಿರುವ ದಾರಿ. ಜಾಗತಿಕ ಲಿಂಗಾಯ ಮಹಾಸಭಾ ಈ ಹೋರಾಟವನ್ನು ಮುನ್ನಡೆಸಲಿದೆ. ಗೃಹ ಸಚಿವರಾಗಿರುವ ಕಾರಣಕ್ಕೆ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.