ADVERTISEMENT

ಸುಹಾಸ್‌ ಶೆಟ್ಟಿ ಹತ್ಯೆ | NIAಗೆ ವಹಿಸುವ ಕುರಿತು ಸಭೆ ನಡೆಸಿ ತೀರ್ಮಾನ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 5:58 IST
Last Updated 9 ಜೂನ್ 2025, 5:58 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ‘ಬಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್‌ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವಂತೆ ಕೇಂದ್ರ ಗೃಹ ಇಲಾಖೆಯಿಂದ ಪತ್ರ ಬಂದಿದೆ. ಈ ಪತ್ರದ ಬಗ್ಗೆ ಇಂದು ಸಭೆ ನಡೆಸಿ, ಎನ್‌ಐಎಗೆ ಕೊಡಬೇಕೇ? ಬೇಡವೇ? ಎಂದು ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಎನ್‌ಐಎಗೆ ಯಾರು ಶಿಫಾರಸು ಮಾಡಿದ್ದಾರೆಂದು ಗೊತ್ತಿಲ್ಲ. ಪ್ರಕರಣ ವರ್ಗಾಯಿಸುವಂತೆ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ನಮ್ಮ ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಯಾವ ಆಧಾರದ ಮೇಲೆ ಎನ್‌ಐಎಗೆ ವಹಿಸುವಂತೆ ಕೇಳಿದ್ದಾರೆಂದು ಗೊತ್ತಿಲ್ಲ’ ಎಂದರು.

ADVERTISEMENT

‘ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ತಡೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಗೊತ್ತಿರಬಹುದೇನೊ? ಯಾರಿಗೆ ಅನ್ಯಾಯ ಆಗಿದೆ ಎನ್ನುವುದೂ ಗೊತ್ತಿಲ್ಲ’ ಎಂದರು.

ಗೃಹ ಖಾತೆ ಬದಲಾವಣೆಗೆ ಕೇಳಿರುವ ಬಗ್ಗೆ ಸುದ್ದಿಗಾರರು ಪ್ರಸ್ತಾಪಿಸಿದಾಗ, ‘ಅದು ಸುಳ್ಳು ಸುದ್ದಿ’ ಎಂದು ಗರಂ ಆದರು.

‘ನಾನು ಖಾತೆ ಬದಲಾವಣೆಗೆ ಕೇಳಿದ್ದೇನಾ? ಹಾಗೆಂದು ಯಾರು ಹೇಳಿದ್ದಾರೆ. ನನ್ನನ್ನೂ ನೇರವಾಗಿ ಕೇಳಬೇಕಿತ್ತಲ್ಲ. ಅದು ಬಿಟ್ಟು ಖಾತೆ ಬದಲಾವಣೆಗೆ ಕೇಳಿದ್ದಾರೆ ಅಂದರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಲ್ತುಳಿತ ಪ್ರಕರಣ ನಮಗೆ ಸವಾಲ್ ಆಗಿದೆ. ಈ ವೇಳೆ ಖಾತೆ ಬದಲಾವಣೆ ಸರಿಯಲ್ಲ. ಈ ಸಂದರ್ಭ ನಾವು ಗಟ್ಟಿಯಾಗಿ ಎದುರಿಸಬೇಕು. ಖಾತೆ ಬದಲಾವಣೆಗೆ ಕೇಳಿದ್ದೇನೆ ಎನ್ನುವುದು ಸುಳ್ಳು’ ಎಂದರು.

‘ಐಪಿಎಲ್‌ ವಿಜೇತ ಆರ್‌ಸಿಬಿ ತಂಡವನ್ನು ವಿಧಾಸೌಧದಲ್ಲಿ ಸನ್ಮಾನಿಸಲು ಗೃಹ ಸಚಿವರಿಗೆ ಇಷ್ಟ ಇರಲಿಲ್ಲ’ ಎಂಬ ಮಾತುಗಳ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ನಾನು ಏನು ಮಾತನಾಡಲ್ಲ. ಈಗಾಗಲೇ ತನಿಖೆ ಆರಂಭವಾಗಿದೆ. ನಿವೃತ್ತ ನ್ಯಾಯಮೂರ್ತಿ ಮೈಕೆಲ್‌ ಡಿಕುನ್ಹ ಆಯೋಗ ತನಿಖೆ ಮಾಡುತ್ತಿದೆ. ತನಿಖೆ ವೇಳೆ ನಾನು ಮಾತನಾಡುವುದು ಸರಿಯಲ್ಲ. ತನಿಖೆ ದಿಕ್ಕು ಬದಲಿಸಿದಂತಾಗುತ್ತದೆ’ ಎಂದರು.

ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ತುಮಕೂರು ವಿಚಾರವಾಗಿ ಭೇಟಿ ಮಾಡಿದ್ದೆ. ತುಮಕೂರು ನಗರ ಬಂದಾಗ ಗೊತ್ತಾಗುವುದಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಆರ್ಚ್ ಹಾಕಲು‌ ಮನವಿ ಮಾಡಿದ್ದೇನೆ’ ಎಂದರು.

‘ತುಮಕೂರು ವರೆಗೆ ಮೆಟ್ರೊ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಲಿದೆ. ಉಪ ನಗರ ರೈಲು ಯೋಜನೆಯ ಬಗ್ಗೆ ಚರ್ಚೆಯೂ ನಡೆಯುತ್ತಿದೆ’ ಎಂದರು.

ಹೇಮಾವತಿ ಗಲಾಟೆ ವಿವಾದ ವಿಚಾರವಾಗಿ ಮಾತನಾಡಿದ ಅವರು, ‘ಪರ್ಯಾಯ ಮಾರ್ಗ ಹುಡುಕಲು ನಾವು ತೀರ್ಮಾನಿಸಿದ್ದೇವೆ. ನೀರಾವರಿ ಸಚಿವರ ಬಳಿ‌ ಮಾತನಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.