ADVERTISEMENT

ವೈದ್ಯಕೀಯ ಪಾಸ್ ದುರುಪಯೋಗ: ಅನಧಿಕೃತ ವಾಸ್ತವ್ಯ, 6 ಮಂದಿ ವಿರುದ್ಧ ಎಫ್ಐಆರ್

ರಿವರ್ ವ್ಯಾಲ್ಯೂ ಹೋಂ ಸ್ಟೇಗೆ ಬೀಗ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 11:40 IST
Last Updated 19 ಏಪ್ರಿಲ್ 2020, 11:40 IST
ಸುಮನ್‌ ಡಿ. ಪನ್ನೇಕರ್ 
ಸುಮನ್‌ ಡಿ. ಪನ್ನೇಕರ್    

ಮಡಿಕೇರಿ: ಬೆಂಗಳೂರಿನಲ್ಲಿ ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪಾಸ್‌ ಪಡೆದು ಕೊಡಗು ಜಿಲ್ಲೆಯ ಹೊದ್ದೂರು ಗ್ರಾಮ ವಾಟೆಕಾಡು ರಿವರ್‌ ವ್ಯಾಲ್ಯೂ ಹೋಂ ಸ್ಟೇಯಲ್ಲಿ ಅನಧಿಕೃತವಾಗಿ ವಾಸ್ತವ್ಯ ಮಾಡಿದ್ದ ಐವರು ಪ್ರವಾಸಿಗರು ಹಾಗೂ ಮಾಲೀಕ ಸೇರಿ ಆರು ಮಂದಿಯ ಮೇಲೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಲೀಕ ವಿನೋದ್‌ ಚಿಣ್ಣಪ್ಪ, ಪ್ರವಾಸಿಗರಾದ ಬೆನಕ ಕುಮಾರ್‌, ಸಂದೀಪ್‌, ವಿನಯ್‌, ಪದ್ಮಶ್ರೀ, ರಕ್ಷಿತಾ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು ಅವರನ್ನು ವಶಕ್ಕೆ ಪಡೆಯಲಾಗಿದೆ. ಕಾರು ಸಹ ವಶಕ್ಕೆ ಪಡೆಯಲಾಗಿದೆ.

ವಿನೋದ್‌ ಚಿಣ್ಣಪ್ಪ ಅವರು ತಮ್ಮ ತಾಯಿಗೆ ಅನಾರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿ ಏ.14ರಂದು ಪಾಸ್‌ ಪಡೆದು ಕೊಡಗಿಗೆ ಇವರನ್ನು ಕರೆಸಿಕೊಂಡಿದ್ದರು.

ಕಳೆದ ಹದಿನೈದು ದಿನಗಳ ಹಿಂದೆಯೂ ತುಮಕೂರು ಮೂಲದ ಇಬ್ಬರು ವ್ಯಕ್ತಿಗಳು, ಬೆಂಗಳೂರಿನಿಂದ ಬಂದು ವಾಸ್ತವ್ಯ ಹೂಡಿರುವುದು ಕಂಡುಬಂದಿತ್ತು. ಅವರನ್ನು ಹೋಮ್ಸ್ ಸ್ಟೇಯಲ್ಲೇ ಕ್ವಾರಂಟೈನ್ ಮಾಡಿ ಹೋಮ್ಸ್ ಸ್ಟೇ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಇದಾದ ಮೇಲೆ ಬೆಂಗಳೂರು ಹಾಗೂ ತುಮಕೂರು ಮೂಲದ ವ್ಯಕ್ತಿಗಳಿಗೆ ವಾಸ್ತವ್ಯಕ್ಕೆ ಅವಕಾಶ ನೀಡಿರುವುದು ಬೆಳಕಿಗೆ ಬಂದಿದೆ.

ಅನಧಿಕೃತ ವಾಸ್ತವ್ಯ ಮಾಡಿರುವ ಮಾಹಿತಿ ಆಧರಿಸಿ, ಮಡಿಕೇರಿ ಗ್ರಾಮಾಂತರ ಹಾಗೂ ಕೊಡಗು ಜಿಲ್ಲೆಯ ಅಪರಾಧ ಪತ್ತೆದಳದ ಪೊಲೀಸರು ದಾಳಿ ನಡೆಸಿದ್ದರು.

ಕೋವಿಡ್‌-19 ಸಂಬಂಧ ರಾಜ್ಯದಾದ್ಯಂತ ಲಾಕ್‌ಡೌನ್ ಇದ್ದು, ಜನ ಸಾಮಾನ್ಯರಿಗೆ ವೈದ್ಯಕೀಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಆದರೆ, ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸುಳ್ಳು ಮಾಹಿತಿ ನೀಡಿ ವಾಸ್ತವ್ಯಕ್ಕೆ ಅವಕಾಶ ನೀಡಿರುವ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ರೆಸಾರ್ಟ್‌: ಕಳೆದ ವಾರ ಲಾಕ್‌ಡೌನ್‌ ನಡುವೆಯೂ 7ನೇ ಹೊಸಕೋಟೆಯ ಸಮೀಪದ ಪ್ಯಾಡಿಂಗ್ಟನ್‌ ರೆಸಾರ್ಟ್‌ನಲ್ಲಿ ಕೆಲವರಿಗೆ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದ ಮೇಲೆ, ಪ್ಯಾಡಿಂಗ್ಟನ್‌ ರೆಸಾರ್ಟ್‌ಗೆ ಜಿಲ್ಲಾಡಳಿತ ಬೀಗ ಹಾಕಿತ್ತು. ಪ್ರವಾಸಿಗರ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗಿತ್ತು. ರೆಸಾರ್ಟ್‌ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿತ್ತು. ಈಗ ಹೋಂ ಸ್ಟೇಯೊಂದರಲ್ಲಿ ಅನಧಿಕೃತ ವಾಸ್ತವ್ಯಕ್ಕೆ ಅವಕಾಶ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

**
ಕೊಡಗಿನ ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದು, ಅದಕ್ಕೆ ಅವಕಾಶ ನೀಡುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ
– ಡಾ.ಸುಮನ್ ಡಿ. ಪನ್ನೇಕರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.