ಹನಿಟ್ರ್ಯಾಪ್
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ‘ಮಧುಬಲೆ’ಗೆ ಕೆಡವಲು ಪ್ರಯತ್ನಿಸಿದ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾಧಿಕಾರಿಗಳು, ವ್ಯಕ್ತಿಯೊಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
‘ಹನಿಟ್ರ್ಯಾಪ್ ಮಾಡಲು ಅಪರಿಚಿತರು ವಕೀಲರ ಸೋಗಿನಲ್ಲಿ ಮನೆಗೆ ಬಂದಿದ್ದರು. ಎರಡು ಬಾರಿ ಭೇಟಿ ಆದಾಗಲೂ ಅವರೊಂದಿಗೆ ಜೀನ್ಸ್ ಪ್ಯಾಂಟ್, ಬ್ಲೂ ಟಾಪ್ ಧರಿಸಿದ್ದ ಯುವತಿ ಬಂದಿದ್ದರು’ ಎಂಬುದಾಗಿ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿಕೆ ನೀಡಿದ್ದಾರೆ. ಅವರ ಆ ಹೇಳಿಕೆ ಹಾಗೂ ಮೂರು ಪುಟಗಳ ದೂರು ಆಧರಿಸಿ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ಕೆಲವರ ಹೇಳಿಕೆ ಪಡೆದುಕೊಳ್ಳಲಾಗಿದೆ. ಗಡ್ಡಧಾರಿ ವ್ಯಕ್ತಿಯೊಬ್ಬರ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರ ಸೂಚನೆ ಮೇರೆಗೆ ಪ್ರಕರಣದ ಕುರಿತು ಸಿಐಡಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಸಿಐಡಿ ವಿಭಾಗದ ಐಜಿಪಿ ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಪಿ ರಾಘವೇಂದ್ರ ಹೆಗಡೆ, ಡಿವೈಎಸ್‌ಪಿ ಕೇಶವಮೂರ್ತಿ ಅವರನ್ನು ಒಳಗೊಂಡ ತಂಡವು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ ಎಂದು ಮೂಲಗಳು ತಿಳಿಸಿವೆ.
ಡೈರಿ ಕೊಂಡೊಯ್ದ ತಂಡ:
ಜಯಮಹಲ್‌ನಲ್ಲಿರುವ ಸರ್ಕಾರಿ ನಿವಾಸದಲ್ಲಿರುವ ಎಲ್ಲ ಸಿಬ್ಬಂದಿಯ ಮಾಹಿತಿ ಪಡೆಯಲಾಗಿದೆ. ಮನೆ ಕೆಲಸದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಾಲ್ಕು ತಿಂಗಳಲ್ಲಿ ನಿವಾಸಕ್ಕೆ ಯಾರ್‍ಯಾರು ಬಂದಿದ್ದರು ಎಂದು ಮಾಹಿತಿ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿವಾಸದ ಭದ್ರತಾ ಅಧಿಕಾರಿ ಬಳಿಯಿದ್ದ ಡೈರಿ ಪಡೆದುಕೊಳ್ಳಲಾಗಿದೆ. ಅದರಲ್ಲಿ ನಮೂದಾಗಿರುವ ಹೆಸರು, ಮೊಬೈಲ್ ಸಂಖ್ಯೆ ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ. ಎರಡು ದಿನ ನಡೆದ ತನಿಖೆಯ ವಿವರವನ್ನು ಡಿಜಿಪಿಯವರಿಗೆ ತನಿಖಾ ತಂಡವು ನೀಡಿದೆ ಎಂದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.