ADVERTISEMENT

ಹನಿಟ್ರ್ಯಾಪ್‌ |ನಮ್ಮೆಲ್ಲರ ನಂಬಿಕೆ, ವಿಶ್ವಾಸಕ್ಕೆ ವಿಷ ಪ್ರಾಶನ: ಸುನಿಲ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 23:30 IST
Last Updated 21 ಮಾರ್ಚ್ 2025, 23:30 IST
ವಿಧಾನಸಭೆಯ ಕಲಾಪದಲ್ಲಿ ವಿರೋಧಪಕ್ಷದ ಶಾಸಕ ಸುನಿಲ್‌ ಕುಮಾರ್ ಮಾತನಾಡಿದರು
ವಿಧಾನಸಭೆಯ ಕಲಾಪದಲ್ಲಿ ವಿರೋಧಪಕ್ಷದ ಶಾಸಕ ಸುನಿಲ್‌ ಕುಮಾರ್ ಮಾತನಾಡಿದರು   

ಬೆಂಗಳೂರು: ‘ಹನಿಟ್ರ್ಯಾಪ್‌ ಪ್ರಯತ್ನದ ಘಟನೆ ನಮ್ಮೆಲ್ಲ ಶಾಸಕರ ನಂಬಿಕೆ, ವಿಶ್ವಾಸಕ್ಕೆ ವಿಷಪ್ರಾಶನ ಮಾಡಿದಂತಾಗಿದೆ’ ಎಂದು ಬಿಜೆಪಿಯ ವಿ.ಸುನಿಲ್‌ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಬೆಳಿಗ್ಗೆ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂತಾಗ, ಸುನಿಲ್ ಅವರು ಹನಿಟ್ರ್ಯಾಪ್‌ ವಿಷಯ ಪ್ರಸ್ತಾಪಿಸಿದರು.

‘ಹನಿಟ್ರ್ಯಾಪ್‌ ಆಗಿದೆ ಎಂದು ಹೇಳಿದವರು ನಿಮ್ಮ ಸಂಪುಟದವರು. ಮಾಡಿಸಲು ಹೊರಟವರೂ ನಿಮ್ಮ ಸಂಪುಟ ಸದಸ್ಯರೇ ಎಂಬ ಮಾತಿದೆ. ಈ ಕುರಿತು ಸ್ಪಷ್ಟ ಉತ್ತರ ನೀಡಬೇಕು ಮತ್ತು ತನಿಖೆ ಆದೇಶಿಸುವ ತನಕ ಉತ್ತರ ನೀಡಲು ಬಿಡುವುದಿಲ್ಲ’ ಎಂದು ಅವರು ಪಟ್ಟು ಹಿಡಿದರು.

ADVERTISEMENT

‘ನಿಮ್ಮದೇ ಸಂಪುಟದವರೊಬ್ಬರು ‘ಹನಿಟ್ರ್ಯಾಪ್‌ ಸಿ.ಡಿ ಫ್ಯಾಕ್ಟರಿ’ ಇಟ್ಟಿದ್ದಾರೆ ಎಂದು ನಿಮ್ಮವರೇ ಹೇಳುತ್ತಿದ್ದಾರೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಹೇಗೆ’ ಎಂದು ಸುನಿಲ್‌ ಪ್ರಶ್ನಿಸಿದರು.

‘ಅಧಿಕಾರ ದಾಹಕ್ಕಾಗಿ ಮೇಲೆ ಬರಬೇಕು ಎಂದು ಈ ರೀತಿಯ ಕೃತ್ಯ ಮಾಡುವುದಕ್ಕೆ ಇತಿಶ್ರೀ ಹಾಡಬೇಕು. ಅವರು ನಿಮ್ಮನ್ನು ಕುರ್ಚಿಯಿಂದ ಇಳಿಸಲು ಮುಂದಾಗಿದ್ದಾರೆ. ಅಂತಹ ವ್ಯಕ್ತಿಯನ್ನು ವಜಾ ಮಾಡಿ. ಈ ಕೃತ್ಯಕ್ಕೆ ಪಕ್ಷ, ಜಾತಿ,ಧರ್ಮ ಏನೂ ಇಲ್ಲ. ಇದನ್ನು ಪಕ್ಷಬೇಧ ಮರೆತು ಎಲ್ಲರೂ ಖಂಡಿಸಬೇಕು’ ಎಂದು ಹೇಳಿದರು.

‘ಹನಿಟ್ರ್ಯಾಪ್‌ ಪ್ರಕರಣದಲ್ಲಿ ಸಚಿವರಿಗೇ ರಕ್ಷಣೆ ಕೊಡಲು ಸಾಧ್ಯವಾಗದೇ ಇದ್ದರೆ, ಸಾರ್ವಜನಿಕರಿಗೆ ರಕ್ಷಣೆ ಸಿಗಬಲ್ಲದೆ? ನಿಮ್ಮ ಸಚಿವ ಸಂಪುಟಕ್ಕೆ ನೈತಿಕತೆ ಇಲ್ಲವೇ? ನೈತಿಕತೆ ಉಳಿಸುವುದು ಮುಖ್ಯ. ತನಿಖೆ ನಡೆಸುತ್ತೇವೆ ಎಂದರೆ  ಪೊಲೀಸ್‌ ಪೇದೆ ಮೂಲಕ ತನಿಖೆ ಮಾಡಿಸುತ್ತೀರಾ? ಯಾವ ರೀತಿಯ ತನಿಖೆ ಎಂಬದು ಸ್ಪಷ್ಟವಾಗಬೇಕಲ್ಲ’ ಎಂದು ಪ್ರಶ್ನಿಸಿದರು.

‘ನಾನು ಈ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಹನಿಟ್ರ್ಯಾಪ್‌ಗೆ ಜಾತಿ ಮತ್ತು ಪಕ್ಷ ಇಲ್ಲ. ಹನಿಟ್ರ್ಯಾಪ್‌ ಮಾಡಿದವರನ್ನು ಸಂಪುಟದಲ್ಲಿ ಉಳಿಸಿಕೊಳ್ಳುತ್ತೀರಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎನ್ನುವುದಾದರೆ ಕ್ರಿಮಿನಲ್‌ ಸಂಪುಟ ಎನ್ನಬೇಕಾಗುತ್ತದೆ. ಅಂತಹ ವ್ಯಕ್ತಿಗಳನ್ನು ಇಟ್ಟುಕೊಂಡು ಸರ್ಕಾರ ನಡೆಸುವುದಾದರೆ, ನಿಮಗೆ ಶೋಭೆ ತರುವುದಿಲ್ಲ. ನಮ್ಮ ಮನೆಗಳಲ್ಲಿ ನಮ್ಮ ವಿರುದ್ಧವೇ ಸಂದೇಹ ಹುಟ್ಟುವಂತೆ ಮಾಡಿದ್ದಾರೆ’ ಎಂದು ಸುನಿಲ್‌ ಕಿಡಿಕಾರಿದರು.

ಇಂತಹ ವಿಷಯಗಳ ಚರ್ಚೆ ನಡೆದು ಮನೆಗೆ ಹೋದಾಗ ಮನೆಯಲ್ಲಿ ತಾಯಿ ಮತ್ತು ನನ್ನ ಹೆಂಡತಿ ಬೈಯ್ಯುತ್ತಾರೆ
ಪ್ರಿಯಾಂಕ್‌ ಖರ್ಗೆ
ಇದೊಂದು ಗಂಭೀರ ಪ್ರಕರಣ. ಮುಖ್ಯಮಂತ್ರಿ ಮತ್ತು ಸಚಿವರಿಗೆ ರಕ್ಷಣೆ ಇಲ್ಲ. ರಾಜಕಾರಣ ಎಷ್ಟು ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ
ಆರಗ ಜ್ಞಾನೇಂದ್ರ ಬಿಜೆಪಿ
ಸಂಪುಟದ ಸಚಿವರೊಬ್ಬರು ಹನಿಟ್ರ್ಯಾಪ್‌ ಮಾಡಿಸಿದ್ದು ಎಂಬ ದೂರಿನ ಬಗ್ಗೆ ನ್ಯಾಯಾಂಗ ಅಥವಾ ಇನ್ಯಾವುದೇ ತನಿಖೆ ನಡೆಸಿ
ಸುರೇಶ್‌ಬಾಬು, ಜೆಡಿಎಸ್‌ ಶಾಸಕ

ನ್ಯಾಯಾಂಗ ತನಿಖೆ ಆಗಲಿ:

ಅಶೋಕ ‘ಮುಖ್ಯಮಂತ್ರಿ ಪದವಿಗಾಗಿ ಎಲ್ಲವನ್ನೂ ಧ್ವಂಸ ಮಾಡಲು ಹೊರಟಿದ್ದಾರೆ ಎಂದರೆ ಸಹಿಸಬೇಕೆ’ ಎಂದು ಪ್ರಶ್ನಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.  ‘ಸುಮಾರು 48 ಮಂದಿ ಸಿ.ಡಿ ಇದೆ ಎಂದು ರಾಜಣ್ಣ ಹೇಳಿದ್ದಾರೆ. ಅದರಲ್ಲಿ ಜಡ್ಜ್‌ ಕೇಂದ್ರ ನಾಯಕರೂ ಕೂಡಾ ಇದ್ದಾರಂತೆ. ಇವರೆಲ್ಲರ ಕಥೆ ಏನು? ಸರ್ಕಾರ ಮತ್ತು ಸಂಪುಟದ ಸಂಪೂರ್ಣ ಜವಾಬ್ದಾರಿ ಇರುವುದು ಮುಖ್ಯಮಂತ್ರಿ ಮೇಲೆ. ಅವರು ಹೆಡ್‌ ಮಾಸ್ಟರ್‌ ಇದ್ದಂತೆ. ಇಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಪ್ರಶ್ನೆ ಇಲ್ಲ. ನಮ್ಮೆಲ್ಲರ ಗೌರವದ ಪ್ರಶ್ನೆ ಎಂದು ಹೇಳಿದರು.

ರಾಜ್ಯಪಾಲರಿಗೆ ದೂರು
ವಿಧಾನಸಭೆಯ ಕಲಾಪ ಮುಕ್ತಾ ಯವಾದ ಬಳಿಕ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರು ರಾಜಭವ ನಕ್ಕೆ ತೆರಳಿ, ‘ಹನಿ ಟ್ರ್ಯಾ‍ಪ್‌’ ಆರೋಪದ ಕುರಿತು ತನಿಖೆ ನಡೆ ಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರು ಸಲ್ಲಿಸಿದರು. ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ ಬಾಬು ನಿಯೋ ಗದ ನೇತೃತ್ವ ವಹಿಸಿದ್ದರು. ‘ಹನಿ ಟ್ರ್ಯಾಪ್‌’ ಆರೋಪದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಹಾಗೂ ಬಿಜೆಪಿ ಶಾಸಕರ ಅಮಾನತು ಮಾಡಿರು ವುದನ್ನು ಹಿಂಪಡೆಯಲು ಸೂಚಿ ಸುವಂತೆ ನಿಯೋಗ ಮನವಿ ಮಾಡಿದೆ. ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ ರಾಜಭವನದಲ್ಲಿ ಇರಲಿಲ್ಲ. ರಾಜ್ಯಪಾಲರ ಸಚಿವಾಲಯದ ಅಧಿಕಾರಿಗಳು ಮನವಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.