ADVERTISEMENT

ಪರಿಶಿಷ್ಟ ಜಾತಿ ಯುವಕನ ಪ್ರೀತಿಸಿದ ಮಗಳ ಮರ್ಯಾದೆಗೇಡು ಹತ್ಯೆ: ಯುವಕ ಆತ್ಮಹತ್ಯೆ

ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ: ಯುವತಿಯ ತಂದೆ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 18:21 IST
Last Updated 27 ಜೂನ್ 2023, 18:21 IST
ಕೀರ್ತಿ ಮತ್ತು ಗಂಗಾಧರ್‌
ಕೀರ್ತಿ ಮತ್ತು ಗಂಗಾಧರ್‌   

ಬಂಗಾರಪೇಟೆ (ಕೋಲಾರ): ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮಂಗಳವಾರ ಮರ್ಯಾದೆಗೇಡು ಹತ್ಯೆ ನಡೆದಿದೆ. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಮಗಳನ್ನು ಆಕೆಯ ತಂದೆಯೇ ಹತ್ಯೆ ಮಾಡಿದ್ದಾನೆ. ಪ್ರಿಯತಮೆಯ ಸಾವಿನ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಯುವಕ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಬೋಡಗುರ್ಕಿ ಗ್ರಾಮದ ಪರಿಶಿಷ್ಟ ಜಾತಿಯ ಗಂಗಾಧರ್‌ (23) ಮತ್ತು ಗೊಲ್ಲ ಸಮುದಾಯದ ಕೀರ್ತಿ (20) ಪರಸ್ಪರ ಪ್ರೀತಿಸುತ್ತಿದ್ದರು. ಇದು ಗೊತ್ತಾಗಿ ಕೀರ್ತಿಯ ತಂದೆ ಕೃಷ್ಣಮೂರ್ತಿ ಮಂಗಳವಾರ ಬೆಳಗ್ಗೆ ತಮ್ಮ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಈ ವಿಷಯ ಕೇಳದ ಯುವಕ ಮೈಸೂರು– ಚೆನ್ನೈ ಎಕ್ಸ್‌ಪ್ರೆಸ್‌ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವತಿಯ ತಂದೆಯನ್ನು ಪೊಲೀಸರು ಬಂಧಿಸಿದ್ದು, ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ADVERTISEMENT

ಕೆಜಿಎಫ್‌ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದ ಕೀರ್ತಿ ಮತ್ತು ಯುವಕನ ಮನೆ ಒಂದೇ ಕಡೆ ಇವೆ. ದ್ವಿತೀಯ ಪಿಯುಸಿ ಅನುತ್ತೀರ್ಣನಾಗಿದ್ದ ಗಂಗಾಧರ್‌ ಗಾರೆ ಕೆಲಸ ಮಾಡುತ್ತಿದ್ದ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದರು. ಈ ವಿಚಾರ ಯುವತಿಯ ಕುಟುಂಬಕ್ಕೆ ಗೊತ್ತಾಗಿ ವಿರೋಧ ವ್ಯಕ್ತಪಡಿಸಿದ್ದರು.

‘ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಕೀರ್ತಿ ಹಟ ಹಿಡಿದಿದ್ದಳು. ಈ ಸಂಬಂಧ ಯುವತಿಯ ಮನೆಯಲ್ಲಿ ಸೋಮವಾರ ರಾತ್ರಿ ಜಗಳ ನಡೆದಿತ್ತು. ಮಂಗಳವಾರ ಬೆಳಿಗ್ಗೆ ಕೃಷ್ಣಮೂರ್ತಿ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದು ಗೊತ್ತಾಗಿ ಯುವಕ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಧರಣಿದೇವಿ ಮಾಲಗತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.