ADVERTISEMENT

ಪಿಯುಸಿ ಪರೀಕ್ಷೆಯಲ್ಲಿ ಫೇಲು; ಆತ್ಮಹತ್ಯೆಗೆ ರೈಲಿನಡಿ ಜಿಗಿದ ಯುವತಿ, ಗೆಳತಿಗೂ ಗಾಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 12:29 IST
Last Updated 14 ಜುಲೈ 2020, 12:29 IST
ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ
ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ   
""
""

ಹೊಸಪೇಟೆ: ಪಿಯುಸಿ ಪರೀಕ್ಷೆಯಲ್ಲಿ ಫೇಲಾದ ವಿಷಯ ತಿಳಿದು, ಅದರಿಂದ ಮನನೊಂದ ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ರೈಲಿನಡಿ ಜಿಗಿದು ಪ್ರಾಣ ತ್ಯಜಿಸಲು ಮಂಗಳವಾರ ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಗೆಳತಿ ರಕ್ಷಿಸಲು ಹೋಗಿದ್ದ ಇನ್ನೊಬ್ಬ ಯುವತಿಗೂ ಗಾಯಗಳಾಗಿವೆ.

ಶ್ರೇಯಾ ಎಸ್‌. ಕದಂ

ನಗರದ ಕೆ.ಎಸ್‌.ಪಿ.ಎಲ್‌. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಶ್ರೇಯಾ ಎಸ್‌. ಕದಂ (18), ರೂಪ ಮೇಟಿ (18) ಗಾಯಗೊಂಡವರು. ಶ್ರೇಯಾ ಈಶ್ವರ ನಗರದ ನಿವಾಸಿಯಾದರೆ, ರೂಪ ಅವರು ಹಳೆ ಮೇದಾರ ರಸ್ತೆ ನಿವಾಸಿ.

ಘಟನೆಯಲ್ಲಿ ಶ್ರೇಯಾ ಅವರ ಕೈ ಬೆರಳು ತುಂಡಾಗಿದ್ದು. ತಲೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.ಅವರಿಗೆ ನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬುಲೆನ್ಸ್‌ನಲ್ಲಿ ಬಳ್ಳಾರಿಗೆ ಕರೆದೊಯ್ಯಲಾಗಿದೆ. ರೂಪ ಅವರ ಸೊಂಟ ಸೇರಿದಂತೆ ದೇಹದ ಬೇರೆ ಬೇರೆ ಭಾಗಗಳಿಗೆ ಬಲವಾದ ಒಳಪೆಟ್ಟುಗಳಾಗಿವೆ. ಅವರಿಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

‘ವಿದ್ಯಾರ್ಥಿನಿಯರು ಬೆಳಿಗ್ಗೆ ವೆಬ್‌ಸೈಟಿನಲ್ಲಿ ಫಲಿತಾಂಶ ನೋಡಿದ್ದಾರೆ. ಶ್ರೇಯಾ 187 ಅಂಕ ಪಡೆದು ಫೇಲಾಗಿದ್ದಾರೆ. ರೂಪ 383 ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಅನುತ್ತೀರ್ಣಗೊಂಡ ಶ್ರೇಯಾ ತೀವ್ರ ಮನನೊಂದು ನಗರ ಹೊರವಲಯದ ಅನಂತಶಯನಗುಡಿ ಬಳಿಯಿರುವ ರೈಲ್ವೆ ಹಳಿಗೆ ಹೋಗಿದ್ದಾರೆ.

ರೂಪ ಮೇಟಿ

ಜತೆಗಿದ್ದ ರೂಪ ಎಷ್ಟೇ ಮನವೊಲಿಸಿದರೂ ಅಲ್ಲಿಂದ ಕದಲಲಿಲ್ಲ. ಈ ವೇಳೆ ನಗರದಿಂದ ಜೆ.ಎಸ್‌.ಡಬ್ಲ್ಯೂ ಕಡೆಗೆ ಹೋಗುತ್ತಿದ್ದ ಸರಕು ಸಾಗಣೆ ರೈಲಿನಡಿ ಶ್ರೇಯಾ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರೇಯಾರನ್ನು ರಕ್ಷಿಸಲು ಹೋಗಿದ್ದ ರೂಪ ಅವರಿಗೂ ಗಾಯಗಳಾಗಿವೆ. ಇಬ್ಬರು ಗಾಯಗೊಂಡು ಕಿರುಚುತ್ತಿರುವ ಶಬ್ದ ಕೇಳಿ ಸ್ಥಳೀಯರು ದೌಡಾಯಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ’ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.