ADVERTISEMENT

ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಶೇ 50ರ ಮಿತಿಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 19:57 IST
Last Updated 26 ಡಿಸೆಂಬರ್ 2021, 19:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಅವುಗಳ ಒಟ್ಟು ಸಾಮರ್ಥ್ಯದ ಶೇಕಡ 50ರಷ್ಟಕ್ಕಿಂತ ಹೆಚ್ಚಿನ ಜನರಿಗೆ ಸೇವೆ ಒದಗಿಸುವಂತಿಲ್ಲ ಎಂಬ ನಿರ್ಬಂಧಕ್ಕೆ ಬೃಹತ್ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ‘ನಮ್ಮ ಜೊತೆ ಚರ್ಚೆಯನ್ನೇ ನಡೆಸದೆ ಸರ್ಕಾರ ಈ ತೀರ್ಮಾನ ಕೈಗೊಂಡಿದೆ’ ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ತೀರ್ಮಾನದಿಂದಾಗಿ ಬಾರ್‌, ಹೋಟೆಲ್, ರೆಸ್ಟೋರೆಂಟ್, ಕಾರ್ಯಕ್ರಮ ಆಯೋಜನೆ ಉದ್ಯಮದ ಮೇಲೆ ಏಟು ಬೀಳಲಿದೆ ಎಂದು ಅವರು ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ರಾವ್, ‘ಹೊಸವರ್ಷದ ಆಚರಣೆಗೆ ನಾಲ್ಕು ದಿನ ಇರುವಾಗ ಸರ್ಕಾರ ಇಂತಹ ಆದೇಶ ಹೊರಡಿಸಿದೆ. ಬಹುಪಾಲು ಹೋಟೆಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್‌ಗಳಲ್ಲಿ ಹೊಸವರ್ಷದ ಆಚರಣೆಗೆ ಸಂಬಂಧಿಸಿದ ಸಿದ್ಧತೆಗಳು ಆಗಿಬಿಟ್ಟಿವೆ. ಈಗ ಈ ರೀತಿಯ ಆದೇಶ ಹೊರಡಿಸಿರುವುದು ಎಷ್ಟು ಸಮಂಜಸ’ ಎಂದು ಪ್ರಶ್ನಿಸಿದರು.

ADVERTISEMENT

‘ನಮ್ಮ (ಹೋಟೆಲ್, ಆತಿಥ್ಯ ಉದ್ಯಮಿಗಳ) ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದಿತ್ತು. ಸಿನಿಮಾ ಮಂದಿರಗಳಲ್ಲಿ ಶೇಕಡ 100ರಷ್ಟು ಆಸನ ಭರ್ತಿ ಮಾಡಬಹುದು. ಬೇರೆಡೆಗಳಲ್ಲಿಯೂ ಜನ ಸೇರಬಹುದು. ಆದರೆ, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಜನ ಸೇರುವಂತೆ ಇಲ್ಲವೇ? ಸರ್ಕಾರವು ಶೇ 50ರ ಮಿತಿ ಎಂಬ ನಿಯಮವನ್ನು ಮೊದಲೇ ಕೈಗೊಳ್ಳಬಹುದಿತ್ತು’ ಎಂದರು.

ಹೋಟೆಲ್ ಮತ್ತು ಆತಿಥ್ಯ ಉದ್ಯಮ ವಲಯವು ಎರಡು ವರ್ಷಗಳಿಂದ ತೊಂದರೆ ಅನುಭವಿಸುತ್ತಿದೆ. ಈ ಉದ್ಯಮಗಳು ಕೋವಿಡ್ ತಡೆ ಶಿಷ್ಟಾಚಾರ ಪಾಲಿಸಿ, ಸಾಮರ್ಥ್ಯದ ಶೇ 100ರಷ್ಟು ಆಸನಗಳನ್ನು ಭರ್ತಿ ಮಾಡಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಐ.ಎಸ್. ಪ್ರಸಾದ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.