ಹಾವೇರಿ: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಬಡವರಿಗೆ ಮನೆ ಹಂಚಿಕೆಯಲ್ಲಿ ಇದುವರೆಗೂ ₹2,100 ಕೋಟಿ ಕಮಿಷನ್ ಪಡೆದುಕೊಂಡಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ದೂರಿದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಯಾರಿಗೆ ಎಷ್ಟು ಕಮಿಷನ್ ಹೋಗಿದೆ ಎಂಬ ನಿಖರ ಮಾಹಿತಿ ಪಟ್ಟಿ ಸಮೇತ ನನ್ನ ಬಳಿಯಿದೆ. ವಿಧಾನಸೌಧ ಒಳಗೆಯೂ ಹೇಳುತ್ತೇನೆ. ಇಂದು ಹಾವೇರಿಯಲ್ಲೂ ಹೇಳುತ್ತಿದ್ದೇನೆ' ಎಂದರು.
'ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಅವರೇ ವಸತಿ ಯೋಜನೆಯ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಮನಿ ಕೊಟ್ಟರಷ್ಟೇ ಮನೆ ಎಂಬ ಸ್ಥಿತಿ ಬಂದಿದೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ' ಎಂದರು.
'ಇಂದು ಪ್ರತಿಯೊಂದು ಕೆಲಸಕ್ಕೂ ರಾಜ್ಯ ಸರ್ಕಾರ ಶೇ 60ರಷ್ಟು ಕಮಿಷನ್ ಪಡೆಯುತ್ತಿದೆ. ನಮ್ಮ ಸರ್ಕಾರದ ಮೇಲೆ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದರು. ಅದನ್ನು ಇದುವರೆಗೂ ಸಾಬೀತು ಮಾಡಲು ಆಗಿಲ್ಲ. ಒಬ್ಬ ಬಿಜೆಪಿ ಕಾರ್ಯಕರ್ತನನ್ನೂ ಬಂಧಿಸಲು ಅಗಿಲ್ಲ. ಅವರ ಆರೋಪ ಸುಳ್ಳು ಎಂಬುದು ಅವರಿಗೂ ಗೊತ್ತಾಗಿದೆ. ಈಗ ಈ ರಾಜ್ಯ ಸರ್ಕಾರ, ರಾಜ್ಯವನ್ನು ಲೂಟಿ ಮಾಡುತ್ತಿದೆ' ಎಂದರು ಆರೋಪಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.