ADVERTISEMENT

'ಡ್ರೋನ್ ವಿಜ್ಞಾನಿ’‌ ಪ್ರತಾಪನ ಸಾಧನೆ ಎಷ್ಟು ನಿಜ?

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 17:40 IST
Last Updated 12 ಜುಲೈ 2020, 17:40 IST
ಪ್ರತಾಪ (ಚಿತ್ರ ಕೃಪೆ: ಫಸ್ಟ್‌ ನ್ಯೂಸ್ ಟಿವಿ‌)
ಪ್ರತಾಪ (ಚಿತ್ರ ಕೃಪೆ: ಫಸ್ಟ್‌ ನ್ಯೂಸ್ ಟಿವಿ‌)   
""

ಬೆಂಗಳೂರು/ಮಂಡ್ಯ: ‘ಡ್ರೋನ್‌ ವಿಜ್ಞಾನಿ’ ಎಂದು ಪ್ರಚಾರ ಪಡೆದಿರುವ ಮಂಡ್ಯದ ಎಂ.ಎನ್‌.ಪ್ರತಾಪ್‌ (ಡ್ರೋನ್‌ ಪ್ರತಾಪ್‌) ಅವರ ಸಾಧನೆಗಳ ವಿಶ್ವಾಸಾರ್ಹತೆ ಬಗ್ಗೆಯೇ ಸಂದೇಹಗಳು ವ್ಯಕ್ತವಾಗಿವೆ.

ಪ್ರತಾಪ್‌ ಅಭಿವೃದ್ಧಿಪಡಿಸಿದರೆನ್ನಲಾದ ಡ್ರೋನ್‌ಗಳ‌ ಕುರಿತಂತೆ ವಿಜ್ಞಾನಿ ಹಾಗೂ ಪತ್ರಿಕೆಯ ಓದುಗ ಆರ್‌.ರಾಧಾಕೃಷ್ಣ ಎಂಬುವರು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

‘ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಡ್ರೋನ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಗೆದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಸ್ಪರ್ಧೆಗಳಲ್ಲಿ ಪ್ರತಾಪ್‌ ಭಾಗವಹಿಸುವ ಮಾತು ಹಾಗಿರಲಿ, ಭಾರತದ ಯಾವುದೇ ಪ್ರತಿನಿಧಿಯೂ ಭಾಗವಹಿಸಿರುವುದಕ್ಕೆ ದಾಖಲೆಗಳಿಲ್ಲ’ ಎನ್ನುತ್ತಾರೆ ರಾಧಾಕೃಷ್ಣ.

ADVERTISEMENT

ಜಪಾನಿನ ಟೊಕಿಯೋದಲ್ಲಿ 2017ರಲ್ಲಿ ನಡೆದ ಇಂಟರ್‌ನ್ಯಾಷನಲ್‌ ರೊಬೋಟಿಕ್‌ ಎಕ್ಸಿಬಿಷನ್‌ನಲ್ಲಿ ಚಿನ್ನದ ಪದಕ, ಜರ್ಮನಿಯ ಹ್ಯಾನೋವರ್‌ನಲ್ಲಿ 2018ರಲ್ಲಿ ನಡೆದ ಇಂಟರ್‌ನ್ಯಾಷನಲ್‌ ಡ್ರೋನ್‌ ಎಕ್ಸ್‌ಪೋದಲ್ಲಿ ಚಿನ್ನದ ಪದಕ, ಆಲ್ಬರ್ಟ್‌ ಐನ್‌ಸ್ಟೀನ್‌ ಇನ್ನೋವೇಷನ್‌ನಲ್ಲಿ ಚಿನ್ನದ ಪದಕ, ಅದೇ ವರ್ಷ ಜರ್ಮನಿಯ ಹ್ಯಾನೋವರ್‌ನಲ್ಲಿ 2018ರಲ್ಲಿ ನಡೆದ ಸಿಇಬಿಐಟಿ ಡ್ರೋನ್‌ ಎಕ್ಸ್‌ಪೋನಲ್ಲಿ ಚಿನ್ನದ ಪದಕ ಗೆದ್ದಿರುವುದಾಗಿ ವಿವಿಧ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳಿಗೆ ನೀಡಿರುವ ಸಂದರ್ಶನಗಳಲ್ಲಿ ಪ್ರತಾಪ್‌ ಹೇಳಿಕೊಂಡಿದ್ದಾರೆ. ಆದರೆ, ಇದರಲ್ಲಿ ನಿಜಾಂಶವಿಲ್ಲ ಎನ್ನುತ್ತಾರೆ ರಾಧಾಕೃಷ್ಣ.

ಈ ಸ್ಪರ್ಧೆಗಳು ಅಥವಾ ಪ್ರದರ್ಶನಗಳನ್ನು ನಡೆಸಿರುವ ಅಂತರರಾಷ್ಟ್ರೀಯ ಸಂಸ್ಥೆಗಳ ಅಧಿಕೃತ ವೆಬ್‌ಲಿಂಕ್‌ ಮತ್ತು ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರ ಮಾಹಿತಿ ಚಿತ್ರ ಮತ್ತು ವಿಡಿಯೊಗಳನ್ನು ರಾಧಾಕೃಷ್ಣ ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

‘ಪ್ರದರ್ಶನಗಳಲ್ಲಿ ಗೆದ್ದಿರುವುದಾಗಿ ಹೇಳಿಕೊಂಡು ಪ್ರತಾಪ್‌ ಅವರು ಪ್ರದರ್ಶಿಸಿರುವ ಪ್ರಮಾಣ ಪತ್ರಗಳಿಗೂ (ಸರ್ಟಿಫಿಕೇಟ್‌) ಸ್ಪರ್ಧೆ ಏರ್ಪಡಿಸಿದ ಸಂಸ್ಥೆಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವಿಜೇತ ತಂಡಗಳು ಪ್ರದರ್ಶಿಸಿರುವ ಪ್ರಮಾಣ ಪತ್ರಗಳಿಗೂ ತುಂಬಾ ವ್ಯತ್ಯಾಸಗಳಿವೆ. ಈ ವಿಚಾರದ ಬಗ್ಗೆ ಸ್ಪಷ್ಟತೆ ಪಡೆಯಲು ಸಂಸ್ಥೆಗಳನ್ನು ಸಂಪರ್ಕಿಸಿದಾಗ ಭಾರತದ ಯಾವುದೇ ವ್ಯಕ್ತಿಗಳು ಸ್ಪರ್ಧಿಸಿಲ್ಲ ಎಂಬುದನ್ನು ಖಚಿತಪಡಿಸಿವೆ’ ಎಂದು ರಾಧಾಕೃಷ್ಣ ತಿಳಿಸಿದ್ದಾರೆ.

‘ಈ ಸ್ಪರ್ಧೆಗಳಲ್ಲಿ ವಿಜೇತರಾದ ತಂಡದವರು ತಾವು ಅಭಿವೃದ್ಧಿಪಡಿಸಿರುವ ಡ್ರೋನ್‌ಗಳ ವಿಶೇಷತೆ ಮತ್ತು ಅವುಗಳ ಕ್ಷಮತೆಯನ್ನು ವಿಡಿಯೊಗಳ ಮೂಲಕ ವಿವರಿಸಿದ್ದಾರೆ. ಆದರೆ, ಪ್ರತಾಪ್‌ ಅಭಿವೃದ್ಧಿಪಡಿಸಿ ಚಿನ್ನದ ಪದಕ ಗಳಿಸಿದ ಡ್ರೋನ್‌ಗಳ ವಿಡಿಯೊಗಳು ಆ ವೆಬ್‌ಸೈಟ್‌ಗಳಲ್ಲಿ ಲಭ್ಯವಿಲ್ಲ. ಸಾಮಾನ್ಯವಾಗಿ ಡ್ರೋನ್‌ ಅನ್ನು ತಂಡವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಅದಕ್ಕೆ ಏವಿಯಾನಿಕ್ಸ್‌ ಎಂಜಿನಿಯರಿಂಗ್‌ ಜ್ಞಾನ ಅಗತ್ಯ. ಏಕ ವ್ಯಕ್ತಿಯಿಂದ ಅದು ಸಾಧ್ಯವಿಲ್ಲದ ಮಾತು’ ಎನ್ನುತ್ತಾರೆ ಅವರು.

‘ಆಲ್ಬರ್ಟ್‌ ಐನ್‌ಸ್ಟೀನ್‌ ಇನ್ನೋವೇಷನ್‌ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವುದಾಗಿ ಅವರು ಹೇಳಿದ್ದಾರೆ. ಆದರೆ ಅಂತಹದ್ದೊಂದು ಪ್ರಶಸ್ತಿಯೇ ಇಲ್ಲ’ ಎಂದೂ ಹೇಳಿದ್ದಾರೆ.

‘ನನ್ನ ಪ್ರಶ್ನೆ ಇಷ್ಟೇ, ಅಂತರ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದಕ್ಕೆ ಪೂರಕವಾಗಿ ಸಂಘಟಕರಿಂದ ಯಾವುದೇ ಅಧಿಕೃತ ಸುದ್ದಿ ಪ್ರಕಟವಾಗಿಲ್ಲ. ಅಷ್ಟಕ್ಕೂ ಪ್ರತಾಪ್‌ ಭಾಗವಹಿಸಿರುವುದಾಗಿ ಹೇಳಿಕೊಂಡಿರುವ ಕೆಲವು ಕಾರ್ಯಕ್ರಮಗಳು ವಾಣಿಜ್ಯ ಉದ್ದೇಶದ ಮೇಳಗಳು ಆಗಿದ್ದವು. ಅಲ್ಲಿ ಯಾವುದೇ ಸ್ಪರ್ಧೆಗಳು ನಡೆದಿಲ್ಲ. ಅಲ್ಲದೆ ತಾವು ಅಭಿವೃದ್ಧಿಪಡಿಸಿದ ಡ್ರೋನ್‌ಗಳ ಬಗ್ಗೆ ಯಾವುದೇ ತಾಂತ್ರಿಕ ವರದಿಯನ್ನೂ ಅವರು ಹಂಚಿಕೊಂಡಿಲ್ಲ. ಆದರೆ, ಪ್ರತಿಷ್ಠಿತ ಡ್ರೋನ್ ಮಾದರಿಗಳ ಮುಂದೆ ಚಿತ್ರ ತೆಗೆಸಿಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಪ್ರತಾಪ್‌ ಅವರ ಪ್ರತಿಭೆಯನ್ನು ಮೆಚ್ಚಿ ಡಿಆರ್‌ಡಿಓದಲ್ಲಿ ಕೆಲಸಕ್ಕೆ ಸೇರಿಸಲು ಸೂಚನೆ ನೀಡಿದ್ದರು ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ ಚೆಕ್‌ ಮೂಲಕ ಇದು ನಿಜ ಸಂಗತಿಯಲ್ಲ ಎಂದು ಹೇಳಿತ್ತು. ಪ್ರತಾಪ್‌ ಹೇಳಿಕೊಂಡಿರುವಂತೆ ಐಐಟಿ, ಆಕ್ಸ್‌ಫರ್ಡ್‌, ಕೇಂಬ್ರಿಜ್‌ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಿದ್ದಕ್ಕೂ ದಾಖಲೆಗಳಿಲ್ಲ. ರಾಜ್ಯದ ಕೆಲವು ಕಾಲೇಜುಗಳಲ್ಲಿ ಭಾಷಣ ಮಾಡಿರುವ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಲಭ್ಯವಿದೆ.

ದೊಡ್ಡ ವಿಜ್ಞಾನಿಗಳೂ ಇಂತಹ ವಿರೋಧ ಎದುರಿಸಿದ್ದಾರೆ: ಪ್ರತಾಪ್‌

‘ದೊಡ್ಡ ದೊಡ್ಡ ವಿಜ್ಞಾನಿಗಳೂ ಇಂತಹ ವಿರೋಧ ಎದುರಿಸಿದ್ದಾರೆ. ಎಲ್ಲಾ ವಿರೋಧಗಳನ್ನು ನಾನು ವಿಶ್ವಾಸದಿಂದ ಎದುರಿಸುತ್ತೇನೆ. ವಿಜ್ಞಾನ ವಸ್ತುಪ್ರದರ್ಶನ ಒಲಿಂಪಿಕ್ಸ್‌ ಅಲ್ಲ, ಅದೊಂದು ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನವಾಗಿದ್ದು ದಾಖಲಾಗಿ ಉಳಿಯುವುದು ಕಡಿಮೆ. ಆದರೂ ನನ್ನ ಬಳಿ ಇರುವ ಪ್ರಮಾಣ ಪತ್ರಗಳು, ಮೆಡಲ್‌ಗಳು, ನಾನು ವಿದೇಶಕ್ಕೆ ಹೋಗಿಬಂದಿರುವ ದಾಖಲಾತಿಗಳೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆ’ ಎಂದು ಪ್ರತಾಪ್‌ ಪ್ರತಿಕ್ರಿಯೆ ನೀಡಿದರು.

‘ಮಕ್ಕಳಿಗೆ ಟ್ಯೂಷನ್‌ ಮಾಡಿ ಬಂದ ಹಣದಿಂದ ಡ್ರೋನ್‌ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದ್ದೇನೆ. ನನ್ನನ್ನು ಬಹಳ ಹತ್ತಿರದಿಂದ ನೋಡಿದವರು, ನನ್ನ ಪ್ರಯೋಗಗಳನ್ನು ಕಂಡವರು ಯಾರೂ ನನ್ನನ್ನು ಅನುಮಾನದಿಂದ ನೋಡುತ್ತಿಲ್ಲ. ಆದರೆ, ನನ್ನನ್ನು ನೋಡದವರು ಮಾತ್ರ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ಇನ್ನು 15 ದಿನದ ಒಳಗೆ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡುತ್ತೇನೆ’ ಎಂದು ಹೇಳಿದರು.

ನಾನು ಕೆಲವು ಕಂಪನಿಗಳ ಯೋಜನೆಗಳಲ್ಲಿ ಕೆಲಸ ಮಾಡಲು ನಿರಾಕರಿಸಿದ್ದೆ. ನನ್ನ ಹೆಸರು ದುರುಪಯೋಗ ಮಾಡಿಕೊಳ್ಳಲು ಹಲವರು ಮುಂದೆ ಬಂದಿದ್ದರು. ಅವರ ಜೊತೆ ನಾನು ಹೋಗದ ಕಾರಣ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಮಾಧ್ಯಮ ಸಂಸ್ಥೆಗಳು ಸೇರಿ ನಾನು ಓದಿದ ಕಾಲೇಜಿಗೂ ಪತ್ರ ಬರೆದಿದ್ದಾರೆ. ಹೀಗಾಗಿ ಎಲ್ಲಾ ಕಡೆಯಿಂದಲೂ ನನ್ನ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ. ನಾನು ಈ ಸಂದರ್ಭದಲ್ಲಿ ದೃತಿಗೆಡುವುದಿಲ್ಲ, ನನ್ನ ಬಳಿ ಇರುವ ದಾಖಲಾತಿಗಳೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆ’ ಎಂದರು.

***


ಚಿತ್ರ–1: ಜರ್ಮನಿಯಲ್ಲಿ ನಡೆದ ಸಿಇಬಿಐಟಿ ಇನ್ನೊವೇಶನ್ ಕಾರ್ಯಕ್ರಮದಲ್ಲಿ ವಿಜೇತ ತಂಡವೊಂದಕ್ಕೆ ಪ್ರಶಸ್ತಿ ನೀಡಿರುವ ಚಿತ್ರ


ಚಿತ್ರ–2: ಪ್ರತಾಪ್ ಅದೇ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಗೆದ್ದಿರುವುದಾಗಿ ಹೇಳಿಕೊಂಡ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.